ಅರ್ಥಪೂರ್ಣವಾಗಿ ಶಿಕ್ಷಕರ ದಿನವನ್ನು ಆಚರಿಸಿದ ಬಾಲವಿಕಾಸ…

ವಿಟ್ಲ : ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ್ಕಾಲರ್ ಶಿಪ್ ಮಾಸ್ಟರ್ ಎಂದೇ ಖ್ಯಾತರಾದ ನಿವೃತ್ತ ಸರಕಾರಿ ಶಿಕ್ಷಕರಾದ ಶ್ರೀ ನಾರಾಯಣ ನಾಯ್ಕ್ ರವರು ಮಾತನಾಡಿ, ” ಎರಡು ರೀತಿಯ ದೇವರು ಕಾಣಸಿಗುವ ಪವಿತ್ರ ಸ್ಥಳವೆಂದರೆ ಅದು ಶಾಲೆ. ಶಿಕ್ಷಕ ವೃತ್ತಿ ಎನ್ನುವುದು ಬಿಳಿ ಬಟ್ಟೆ ಇದ್ದಂತೆ. ಅಂತಹ ಶುಭ್ರ ಬಟ್ಟೆಯಲ್ಲಿ ಒಂದು ಕಲೆಯೂ ಆಗದ ರೀತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಹೇಳುವ ಮೊದಲು ಶಿಕ್ಷಕರು ಅದನ್ನು ಪಾಲಿಸುವಂತಿರಬೇಕು. ಬಾಲವಿಕಾಸದ ಶಿಕ್ಷಕರು ಇಂತಹ ಗುಣಗಳಿಗೆ ಉತ್ತಮ ನಿದರ್ಶನವಾಗಿ ಕಾಣುತ್ತಾರೆ. ಇಲ್ಲಿನ ಶಿಕ್ಷಕರ ಸಂಸ್ಕಾರ ವಿದ್ಯಾರ್ಥಿಗಳ ಶಿಸ್ತಿನಲ್ಲಿ ಪ್ರತಿಬಿಂಬಿತವಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ಶ್ರಮಪಟ್ಟು ಓದಿದರೆ ವಿದ್ಯಾಸರಸ್ವತಿಯನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಪ್ರಹ್ಲಾದ್ ಜೆ ಶೆಟ್ಟಿ ಯವರು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಶಿಕ್ಷಕರ ದಿನದ ಪ್ರಯುಕ್ತ ಉಡುಗೊರೆ ನೀಡಿ ಶುಭ ಹಾರೈಸಿದರು. ಮಾತ್ರವಲ್ಲದೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ನಾರಾಯಣ ನಾಯ್ಕ್ ರವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ, ಅಭಿನಂದಿಸುವ ಮೂಲಕ ಬಾಲವಿಕಾಸ ವಿದ್ಯಾಸಂಸ್ಥೆಯ ಪರವಾಗಿ ಅವರನ್ನು ಸನ್ಮಾನಿಸಿದರು. ಶಾಲೆಯ ಆಡಳಿತಾಧಿಕಾರಿಯಾದ ರವೀಂದ್ರ ದರ್ಬೆ, ಮುಖ್ಯೋಪಾಧ್ಯಾಯಿನಿಯಾದ ವಿಜಯಲಕ್ಷ್ಮಿ ವಿ ಶೆಟ್ಟಿ ಹಾಗೂ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆಯಾದ ಕಸ್ತೂರಿ ಪಿ ಶೆಟ್ಟಿಯವರು ದಿನದ ಮಹತ್ವದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಶಿಕ್ಷಕರಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅತಿಥಿಗಣ್ಯರನ್ನು ಒಳಗೊಂಡಂತೆ ಎಲ್ಲಾ ಶಿಕ್ಷಕ ವೃಂದದವರು ಸರ್ವೆಪಲ್ಲಿ ಡಾ ll ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಶಿಕ್ಷಕರ ದಿನಾಚರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮದ ಅನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಶಿಕ್ಷಕರಿಗೆ ಕೆಲವು ಮನೋರಂಜನಾ ಆಟಗಳನ್ನು ಆಯೋಜಿಸಿದರು. ವಿದ್ಯಾರ್ಥಿನಿಯರಾದ ಅನಿಶಾ ಆರ್ ಮತ್ತು ಪ್ರಕೃತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೊಹಮ್ಮದ್ ಅಮೀರ್ ಸ್ವಾಗತಿಸಿ, ವೃದ್ಧಿ ಎ. ಕೊಂಡೆ ವಂದಿಸಿದರು. ಈ ಸಂದರ್ಭದಲ್ಲಿ ಬಾಲವಿಕಾಸ ಟ್ರಸ್ಟ್ ನ ಉಪಾಧ್ಯಕ್ಷರಾದ ಯತಿರಾಜ್ ಕೆ ಎನ್ ಹಾಗೂ ಕಾರ್ಯದರ್ಶಿಯಾದ ಮಹೇಶ್ ಜೆ ಶೆಟ್ಟಿ ಉಪಸ್ಥಿತರಿದ್ದರು.