ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಯೆನ್ ಸಂಭ್ರಮ – 2023…
ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು “ಯೆನ್ ಸಂಭ್ರಮ – 2023 ” ಅ. 31 ರಂದು ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೂಡುಬಿದ್ರೆಯ ಟಾಪ್ ಎಂಟರ್ ಟ್ರೈನರ್ಸ್ ಡಾನ್ಸ್ ಅಕಾಡೆಮಿಯ ಮುಖ್ಯ ನೃತ್ಯ ಸಂಯೋಜಕ ರೂಪೇಶ್ ಕುಮಾರ್ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪ್ರೊ. ರೋಷನ್ ಮೆಲ್ವಿನ್ ಡಿಸೋಜಾ, ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ರಜತ್ ಪ್ರಾರ್ಥಿಸಿದರು. ಪ್ರೊ. ರೋಷನ್ ಮೆಲ್ವಿನ್ ಡಿಸೋಜಾ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು. ಹಿತಾ ಎಸ್ ಚೌಟ ವಂದಿಸಿದರು. ಮೆಹನಾಜ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹಾಡುಗಾರಿಕೆ, ರಸಪ್ರಶ್ನೆ, ಗ್ರೂಪ್ ಡಾನ್ಸ್, ರಂಗೋಲಿ, ಅಗ್ನಿ ರಹಿತ ಅಡುಗೆ, ಮಡಕೆ ಒಡೆಯುವ ಸ್ಪರ್ಧೆ, ಮೆಹಂದಿ, ಫೋಟೋಗ್ರಫಿ, ಆಶು ಭಾಷಣ ಮೊದಲಾದ 15 ಕ್ಕೂ ಅಧಿಕ ವಿಭಾಗಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.