ಹವ್ಯಕ ವಲಯ ಸುಳ್ಯ ಸಮಿತಿಯ ಸಭೆ- ಪಾಮ್ ಕೃಷಿ ಬಗ್ಗೆ ಮಾಹಿತಿ….
ಸುಳ್ಯ : ಪೆರಾಜೆಯ ಕೃಷ್ಣ ಶರ್ಮಾ ಪಿಲುಂಗುಳಿ ಯವರ ಮನೆಯಲ್ಲಿ ಮಾ.8 ರಂದು ಸಂಜೆ ನಡೆದ ಹವ್ಯಕ ವಲಯ ಸುಳ್ಯ ಸಮಿತಿಯ ಸಭೆಯಲ್ಲಿ ವಸಂತ ಭಟ್ ತೊಡಿಕಾನ ಇವರು ಸಂವಾದ ನಡೆಸಿ, ಪಾಮ್ ಕೃಷಿ ರೈತರಿಗೆ ವರದಾನ ಎಂದು ಪ್ರತಿಪಾದಿಸಿದರು.
ವಲಯಾಧ್ಯಕ್ಷ ಈಶ್ವರಕುಮಾರ್ ಭಟ್ ಉಬರಡ್ಕ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿಷ್ಣುಕಿರಣ್ ನೀರಬಿದಿರೆ ಗತಸಭೆಯ ವರದಿ ವಾಚಿಸಿ, ಮಂಡಲದ ಸುತ್ತೋಲೆ ಮಾಹಿತಿ ನೀಡಿದರು. ಎಲ್ಲ ಗುರಿಕ್ಕಾರರು ಮತ್ತು ವಿಭಾಗ ಪ್ರಮುಖರು ಮಾಹಿತಿ ನೀಡಿದರು.
ಅಕಾಲಿಕ ದೈವಾಧೀನರಾದ ಮಠದ ಕಾರ್ಯಕರ್ತ ಲಕ್ಷ್ಮೀನಾರಾಯಣ ಭಟ್ ನೆತ್ರಕೆರೆ, ಶ್ರೀಕಾರ್ಯಕರ್ತ ಮಧುಕರ ಹೆಬ್ಬಾರ್, ಮತ್ತು ಗೋಕರ್ಣ ದೇವಾಲಯದ ತಂತ್ರಿ ಶಿತಿಕಂಠ ಅಗ್ನಿಹೋತ್ರಿ ಗಳಿಗೆ ಸಂತಾಪ ಸೂಚಿಸಲಾಯಿತು.
ಮಾ.7 ರಂದು ನಡೆದ ಮಲೆನಾಡು ಗಿಡ್ಡ ಹಬ್ಬದ ಸಂಪೂರ್ಣ ಮಾಹಿತಿಯನ್ನು ಸಮಿತಿ ಕಾರ್ಯದರ್ಶಿ ವಿಜಯಕೃಷ್ಣ ಕಬ್ಬಿನಹಿತ್ತಿಲು ಮಂಡಿಸಿದರು.
ಮೈತ್ರಿ ಉಬರಡ್ಕ ಹಾಡಿದರು. ಮಾ. 30 ರಂದು ಮಾಣಿ ಮಠದಲ್ಲಿ ನಡೆಯುವ ಪಾದುಕಾ ಪೂಜೆಯ ಮಾಹಿತಿ ನೀಡಲಾಯಿತು. ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಪ್ರಾರಂಭಗೊಂಡ ಸಭೆ ಶಾಂತಿಮಂತ್ರ, ಶಂಖನಾದ ,ಧ್ವಜಾವರೋಹಣದೊಂದಿಗೆ ಮುಗಿಯಿತು.