ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಹೆಚ್ಚಿನ ಅನುದಾನ -ಗೋವಿಂದ ಕಾರಜೋಳ….
ಮಂಗಳೂರು: ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಪ್ರಸ್ತುತ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 5 ಕೋ.ರೂ.ಅನುದಾನ ನೀಡಿದ್ದು ಇದನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪುರಭವನದಲ್ಲಿ ರವಿವಾರ ದಿ| ವಡ್ಡರ್ಸೆ ರಘರಾಮ ಶೆಟ್ಟಿ ವೇದಿಕೆಯಲ್ಲಿ ಜರಗಿದ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ ಸಮ್ಮಾನ ನೆರವೇರಿಸಿ ಮಾತನಾಡಿದ ಅವರು ಈ ಭರವಸೆ ನೀಡಿದರು.
ಉದಯವಾಣಿಯ ಸಹಾಯಕ ಸಂಪಾದಕ ಮನೋಹರ ಪ್ರಸಾದ್, ಬೆಂಗಳೂರು ಆವೃತ್ತಿಯ ಉಪ ಮುಖ್ಯ ವರದಿಗಾರ ಲಕ್ಷ್ಮೀನಾರಾಯಣ, ಬೈಂದೂರು ಸ್ಟಿಂಗರ್ ಅರುಣ್ ಕುಮಾರ್ ಶಿರೂರು ಹಾಗೂ ಹಿರಿಯ ಪತ್ರಕರ್ತರಾದ ತಿಮ್ಮಪ್ಪ ಭಟ್, ಆನಂದ ಶೆಟ್ಟಿ, ಪದ್ಮರಾಜ ದಂಡಾವತಿ, ಪೆ.ನಾ. ಗೋಪಾಲ ರಾವ್, ಜಿ.ಎನ್.ಮೋಹನ್ ಸಹಿತ ಹಲವು ಮಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನಾಡಿ ಪತ್ರಕರ್ತರು ಸಮಾಜದ, ಜನಸಾಮಾನ್ಯರ ಧ್ವನಿಯಾಗಿದ್ದಾರೆ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಪತ್ರಕರ್ತರು ದುರ್ಬಲ ವರ್ಗದವರ ಧ್ವನಿಯಾಗಬೇಕು ಎಂದರು. ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಸಚಿವ ಕೃಷ್ಣ ಪಾಲೆಮಾರ್, ರೋನ್ಸ್ ಬಂಟ್ವಾಳ ಮುಖ್ಯ ಅತಿಥಿಯಾಗಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು.
ಭಾರತೀಯ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಏಷ್ಯಾ ಒಕ್ಕೂಟದ ಸಂಚಾಲಕ ಎಚ್.ಬಿ. ಮದನಗೌಡ, ಕರ್ನಾಟಕ ಪತ್ರಕರ್ತರ ಸಂಘದ ಪ್ರ. ಕಾರ್ಯದರ್ಶಿ ಜಿ.ಸಿ.ಲೋಕೇಶ್, ದ.ಕ.ಜಿಲ್ಲಾ ಸಂಘದ ಪ್ರ. ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪ್ರಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಸಮ್ಮೇಳನ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪಿ.ಬಿ. ಹರೀಶ್ ರೈ ನಿರೂಪಿಸಿದರು.