ಕೊರೊನಾ ಮುನ್ನೆಚ್ಚರಿಕೆ…
ಮಂಗಳೂರು: ಚೀನಾದ ಮಾರಕ ಕೊರೊನಾ ವೈರಾಣು ಸೋಂಕು ಬಾಧಿತ ಭಾರತದ ಪ್ರಥಮ ಪ್ರಕರಣ ಸಮೀಪದ ಕೇರಳದಲ್ಲಿ ಪತ್ತೆಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮಂಗಳೂರು ಜಿ.ಪಂ. ಸಭಾಂಗಣದಲ್ಲಿ ಜ. 30 ರಂದು ನಡೆದ ಸಭೆಯಲ್ಲಿ ಕೊರೊನಾ ಸೋಂಕು ಪತ್ತೆ, ಮುನ್ನೆಚ್ಚರಿಕೆ ಕ್ರಮ ಹಾಗೂ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವಮಂಗಳೂರು ಬಂದರು ಮಂಡಳಿ, ರೈಲ್ವೆ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ್ದರು.
ವೆನ್ಲಾಕ್‌ನಲ್ಲಿ 10 ಬೆಡ್: ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇ ತುರ್ತು ಸಂದರ್ಭ ಬಳಸಲು ಸಾಧ್ಯವಾಗುವಂತೆ ಇತರ ವಾರ್ಡ್‌ಗಳಿಂದ ಪ್ರತ್ಯೇಕಿಸಿ 10 ಬೆಡ್‌ಗಳನ್ನು ಕಾದಿರಿಸಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೂ ಅವರು ವಹಿಸಬೇಕಾದ ಪಾತ್ರಗಳ ಬಗ್ಗೆ ನಿಖರ ಮಾಹಿತಿ ಒದಗಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನವೀನ್ ತಿಳಿಸಿದ್ದಾರೆ.
ಭಯ ಬೇಡ, ಎಚ್ಚರವಿರಲಿ
– ಲಕ್ಷಣ: ತೀವ್ರ ಜ್ವರ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ.
– ಹರಡುವ ರೀತಿ: ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ, ಸೋಂಕಿತರನ್ನು ಮುಟ್ಟುವುದರಿಂದ ಹರಡಬಹುದು.
– ಸೋಂಕು ಪತ್ತೆ: ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿ ಪರೀಕ್ಷೆ.
– ಚಿಕಿತ್ಸೆ: ಲಕ್ಷಣ ಆಧಾರಿತ ಚಿಕಿತ್ಸೆ. ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ.
– ಮುಂಜಾಗರೂಕತಾ ಕ್ರಮ: ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವುದು, ಕೈಯನ್ನು ಆಗಾಗ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯ ಕ್ರಮ. ಅನಾರೋಗ್ಯದಿಂದಿರುವ ಅಥವಾ ಕೆಮ್ಮು ಮತ್ತು ನೆಗಡಿ ಇತ್ಯಾದಿ ಅನಾರೋಗ್ಯದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದದಿರುವುದು. ಪ್ರಾಣಿಗಳ ನೇರ ಸಂಪರ್ಕ ಹಾಗೂ ಬೇಯಿಸದ ಅಥವಾ ಕಚ್ಚಾ ಮಾಂಸ ಸೇವನೆ ಮಾಡದಿರುವುದು.