ಕರ್ನಾಟಕ ಯಕ್ಷ ಭಾರತಿಯಿಂದ ಸಾಂಪ್ರದಾಯಿಕ ಬಯಲಾಟ ‘ಮಾಯಾವಿ ಇಂದ್ರಜಿತು – ಶ್ರೀ ರಾಮ ನಿಜ ಪಟ್ಟಾಭಿಷೇಕ’…
ಮಂಗಳೂರು: ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯ ಶಂಕರ ಅವರ ಜೀವಮಾನ ಸಾಧನೆಗಾಗಿ ಕೋಟೆಕಾರಿನ ಶೃಂಗೇರಿ ಶಂಕರ ಮಠದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಜ. 22ರಂದು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರಿಂದ ‘ಮಾಯಾವಿ ಇಂದ್ರಜಿತು – ಶ್ರೀರಾಮ ನಿಜ ಪಟ್ಟಾಭಿಷೇಕ’ ಎಂಬ ಸಾಂಪ್ರದಾಯಿಕ ಯಕ್ಷಗಾನ ಬಯಲಾಟ ಜರಗಿತು.
ವನವಾಸದ ರಾಮ ಲಕ್ಷ್ಮಣರು ಪರಂಪರೆಯ ರಾಜ ವೇಷದಲ್ಲಿ ಕಿರೀಟಧಾರಿಗಳಾಗಿ ಪ್ರವೇಶ, ಶ್ರೀರಾಮನ ಒಡ್ಡೋಲಗ, ಸಭಾ ಕ್ಲಾಸ್, ಬಣ್ಣದ ವೇಷದ ತೆರೆ ಕುಣಿತ, ರಾವಣನ ಶಿವಪೂಜೆ, ಹನುಮಂತನ ತೆರೆ ಪರ್ಪಾಟ್ …ಇತ್ಯಾದಿ ಹಳೆಯ ಸಂಪ್ರದಾಯದ ನೃತ್ಯ ವೈವಿಧ್ಯಗಳೊಂದಿಗೆ ಈ ಯಕ್ಷಗಾನವನ್ನು ಪ್ರದರ್ಶಿಸಲಾಗಿತ್ತು.
ತೆಂಕು ತಿಟ್ಟಿನ ಪ್ರಸಿದ್ಧ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಾದ ಕುಂಬಳೆ ಶ್ರೀಧರ ರಾವ್ , ಭಾಸ್ಕರ ರೈ ಕುಕ್ಕುವಳ್ಳಿ , ಡಾ.ದಿನಕರ ಎಸ್.ಪಚ್ಚನಾಡಿ, ಪುಷ್ಪರಾಜ ಕುಕ್ಕಾಜೆ , ಸುನಿಲ್ ಪಲ್ಲಮಜಲು, ಪ್ರಶಾಂತ್ ಮುಂಡ್ಕೂರು, ಪದ್ಮನಾಭ ಮಾಸ್ಟರ್ , ಶರತ್ ಪಣಬೂರು, ಹರಿಶ್ಚಂದ್ರ ನಾಯಗ ಮಾಡೂರು , ಸಂತೋಷ್ ಪಂಜಿಕಲ್ಲು , ಗುರುಪ್ರಸಾದ್ ಕುಳಾಯಿ, ಸಾತ್ವಿಕ್ ಕೊಂಚಾಡಿ, ಅಕ್ಷಯ್ ಆಚಾರ್ಯ ಪಾತ್ರಧಾರಿಗಳಾಗಿದ್ದರು. ಭಾಗವತರಾಗಿ ಮಹೇಶ್ ಕನ್ಯಾಡಿ ಹಾಗೂ ಹಿಮ್ಮೇಳದಲ್ಲಿ ನಿಡುವಜೆ ಶಂಕರ ಭಟ್,ನೆಕ್ಕರೆ ಮೂಲೆ ಗಣೇಶ್ ಭಟ್ ಮತ್ತು ಹರೀಶ್ ಹೆಬ್ಬಾರ್ ಭಾಗವಹಿಸಿದ್ದರು.
ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು. ಹವ್ಯಾಸಿ ಬಳಗ ಕದ್ರಿಯ ಶರತ್ ಕುಮಾರ್ ಕದ್ರಿ ವೇಷ ಭೂಷಣ ಒದಗಿಸಿದ್ದರು. ಅಭಿನಂದನ ಸಮಿತಿಯ ಮೋಹನ್ ರಾವ್ ಕೊಯಿಲ ನಿರೂಪಿಸಿ, ವಂದಿಸಿದರು.