ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – 5 ದಿನಗಳ ಕೌಶಲ್ಯ ಉದ್ದೀಪನಾ ಕಾರ್ಯಾಗಾರಕ್ಕೆ ಚಾಲನೆ…

ಪುತ್ತೂರು: ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರವು ಸೊರಗಿದೆ ಎನ್ನುವ ಮಾತಿದೆ ಇದು ಸಂಪೂರ್ಣ ತಪ್ಪು, ಇತರ ಕ್ಶೇತ್ರಗಳ ವ್ಯಾಪಕ ಬೆಳವಣಿಗೆಯಿಂದ ಹಾಗನಿಸುತ್ತಿದೆ ಎಂದು ಬೆಂಗಳೂರಿನ ಶಂಕರನಾರಾಯಣ ಗ್ರೂಪ್‍ನ ಮುಖ್ಯಸ್ಥ ಪಿ ಆರ್ ಸೆಲ್ವಗಣೇಶ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯ ಪುತ್ತೂರು ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ನಡೆದ ನಿರ್ಮಾಣ ಕ್ಷೇತ್ರದಲ್ಲಿನ ಇತ್ತೀಚಿನ ಹೊಸತನಗಳು ಹಾಗೂ ಗುಣಮಟ್ಟದ ಮಾನದಂಡಗಳು ಎನ್ನುವ ವಿಷಯದ ಬಗ್ಗೆ 5 ದಿನಗಳ ಕೌಶಲ್ಯ ಉದ್ದೀಪನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಿಯೂ ಸಲ್ಲುವ ಸಿವಿಲ್ ಇಂಜಿನಿಯರುಗಳ ಸೇವೆ ಮತ್ತು ತ್ಯಾಗ ಮಹತ್ತರವಾದದ್ದು. ದೇಶದ ನಿರ್ಮಾಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು ಸಿವಿಲ್ ಇಂಜಿನಿಯರುಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಬರಲಿದೆ ಎಂದ ಅವರು ಸಂಪ್ರದಾಯ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ಬೋಧಿಸುತ್ತಿರುವ ಈ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಭಾಗ್ಯಶಾಲಿಗಳು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಸಮಾಜಮುಖೀ ಚಿಂತನೆಯೊಂದಿಗೆ ರಾಷ್ಟ್ರಪ್ರೇಮವುಳ್ಳ ಇಂಜಿನಿಯರುಗಳನ್ನು ಸಮಾಜಕ್ಕೆ ಅರ್ಪಿಸುವ ಕಾರ್ಯದಲ್ಲಿ ಕಾಲೇಜು ನಿರತವಾಗಿದೆ. ಇಲ್ಲಿನ ವಿದ್ಯಾರ್ಥಿಗಳನ್ನು ಕಾರ್ಯನಿರತ ಇಂಜಿನಿಯರುಗಳನ್ನು, ಗುತ್ತಿಗೆದಾರರನ್ನು ಉಪನ್ಯಾಸಕರನ್ನು ಹಾಗೂ ಮೇಲ್ವಿಚಾರಕರನ್ನು ಒಟ್ಟು ಸೇರಿಸಿ ಹೊಸತನದ ಬದಲಾವಣೆಗಳನ್ನು ತಿಳಿಸುವ ಯೋಜನೆಯೊಂದಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಲ್ಲರೂ ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಮಾತನಾಡಿ ನಾವು ಹೋಗುವ ದಾರಿ, ಬಳಸುವ ವಸ್ತುಗಳು ಬಹಳ ಬದಲಾಗಿವೆ. ಈ ಬದಲಾವಣೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ನಾವು ಕಾಲದೊಂದಿಗೆ ಹೆಜ್ಜೆ ಹಾಕಬಹುದು ಮತ್ತು ಅಂಜಿಕೆ ಅಳುಕನ್ನು ಮೆಟ್ಟಿ ಆತ್ಮವಿಶ್ವಾಸದೊಂದಿಗೆ ಸಮಾಜಮುಖೀ ಕೆಲಸಗಳನ್ನು ನಡೆಸಬಹುದು ಎಂದರು. ಭಾಗವಹಿಸಿದ ಎಲ್ಲರೂ ಇಲ್ಲಿಂದ ಹೊರ ಹೋಗುವಾಗ ಹೊಸ ಹೊಸ ವಿಚಾರಗಳನ್ನು ಕಲಿತುಕೊಂಡು ನೂತನ ದೃಷಿಕೋನದೊಂದಿಗೆ ತೆರಳುವಂತಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು
ಕಾರ್ಯಕ್ರಮ ಸಂಯೋಜಕಿ ಡಾ.ಸೌಮ್ಯ.ಎನ್.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದ್ಮಶ್ರೀ ಪುರಸ್ಕೃತ ಹಿರಿಯ ಸಿವಿಲ್ ಇಂಜಿನಿಯರ್ ಗಿರೀಶ್ ಭಾರದ್ವಾಜ್ ಸಮಾರಂಭದಲ್ಲಿ ಹಾಜರಿದ್ದರು. ಸುಳ್ಯ, ಪುತ್ತೂರು, ಬೆಳ್ತಂಗಡಿಯ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯದ ಪದಾಧಿಕಾರಿಗಳು, ಪಿಡಬ್ಲ್ಯುಡಿ ಇಂಜಿನಿಯರುಗಳು, ಕಾರ್ಯನಿರತ ಸಿವಿಲ್ ಇಂಜಿನಿಯರುಗಳು ಉಪನ್ಯಾಸಕರು, ಸಂಶೋಧನಾ ನಿರತರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಸ್ವಾಗತಿಸಿ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯ ಪುತ್ತೂರು ಕೇಂದ್ರದ ಅಧ್ಯಕ್ಷ ಪ್ರಮೋದ್ ಕುಮಾರ್ ವಂದಿಸಿದರು. ಪ್ರೊ.ಸುರೇಖಾ.ಟಿ ಹಾಗೂ ಭವಾನಿ ಕಾರ್ಯಕ್ರಮ ನಿರ್ವಹಿಸಿದರು.

fdp cv 2023

fdp cv 2023 1

Sponsors

Related Articles

Back to top button