ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಆಗಮನ: ಕೂಳೂರು-ಸುರತ್ಕಲ್ ಹೆದ್ದಾರಿ ತಕ್ಷಣ ದುರಸ್ತಿಗೆ ಡಿ.ಸಿ ಸೂಚನೆ….
ಮಂಗಳೂರು: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ನವೆಂಬರ್ 2 ರಂದು ಮಂಗಳೂರಿಗೆ ಆಗಮಿಸುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೂಳೂರಿನಿಂದ ಸುರತ್ಕಲ್ ಎನ್‍ಐಟಿಕೆವರೆಗೆ ದುರಸ್ತಿ ಕಾಮಗಾರಿಯನ್ನು ತಕ್ಷಣವೇ ನಡೆಸಲು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸೂಚಿಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಪರಾಷ್ಟ್ರಪತಿಗಳ ಆಗಮನ ಪ್ರಯುಕ್ತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ನಿರಂತರ ಮಳೆಯಿಂದ ದುರಸ್ತಿ ಕಾಮಗಾರಿಗೆ ಅಡ್ಡಿಯಾಗಿದೆ. ಆದರೂ, ಉಪರಾಷ್ಟ್ರಪತಿಗಳ ಆಗಮನ ಸಂಧರ್ಭದಲ್ಲಿ ರಸ್ತೆಯನ್ನು ಸುವ್ಯವಸ್ಥಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಉಪರಾಷ್ಟ್ರಪತಿಗಳ ಕಾರ್ಯಕ್ರಮದ ಸಿದ್ದತೆಗಳನ್ನು ಪರಿಶೀಲಿಸಿದರು. ಭದ್ರತೆ, ಸಂಚಾರ, ಆಹಾರ, ಸಭಾ ಸ್ಥಳದಲ್ಲಿ ಭದ್ರತೆ ವ್ಯವಸ್ಥೆ, ಮಾಧ್ಯಮ ನಿರ್ವಹಣೆ ಮತ್ತಿತರ ವಿಷಯಗಳ ಕುರಿತು ಆಯಾ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಯಾವುದೇ ಲೋಪಗಳಿಲ್ಲದಂತೆ ಕಾರ್ಯ ನಿರ್ವಹಿಸಲು ಸೂಚಿಸಿದರು.
ಸಭೆಯಲ್ಲಿ ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಎನ್‍ಐಟಿಕೆ ನಿರ್ದೇಶಕ ಉಮಾಮಹೇಶ್ವರ ರಾವ್, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ ರಾವ್ ಮತ್ತಿತರರು ಉಪಸ್ಥಿತರಿದ್ದರು.