ನ.29: `ಪೆನ್ಸಿಲ್ ಬಾಕ್ಸ್’ ಕನ್ನಡ ಚಲನಚಿತ್ರ ಕರಾವಳಿ ಭಾಗದಲ್ಲಿ ತೆರೆಗೆ….
ಪುತ್ತೂರು: ದೃಶ್ಯ ಮೂವೀಸ್ ಬ್ಯಾನರಿನಡಿಯಲ್ಲಿ ಉದ್ಯಮಿ ದಯಾನಂದ ಎಸ್ ರೈ ಅವರ ನಿರ್ಮಾಣದಲ್ಲಿ ತಯಾರಾದ ಮಕ್ಕಳ ಕಥಾನಕವನ್ನೊಳಗೊಂಡ ಸದಭಿರುಚಿಯ ಮನರಂಜನೆಯ `ಪೆನ್ಸಿಲ್ ಬಾಕ್ಸ್’ ಕನ್ನಡ ಚಲನಚಿತ್ರ ನ.29 ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಕರಾವಳಿ ಭಾಗದ ಎಲ್ಲಾ ಕಡೆಗಳ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚನಲಚಿತ್ರದ ನಿರ್ಮಾಪಕ ದಯಾನಂದ ಎಸ್.ರೈ ತಿಳಿಸಿದ್ದಾರೆ.
ಅವರು ಬುಧವಾರ ಪುತ್ತೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ `ಪೆನ್ಸಿಲ್ ಬಾಕ್ಸ್’ ಚಲನಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಈ ಚಲನಚಿತ್ರದಲ್ಲಿ ಸ್ಟಾರ್ ಸುವರ್ಣ ಡ್ಯಾನ್ಸ್ ಸೀಸನ್-2 ಹಾಗೂ ಕಾಮಿಡಿ ರಿಯಾಲಿಟಿ ಶೋ ಮೂಲಕ ಕರ್ನಾಟಕದಲ್ಲಿ ಮನೆಮಾತಾದ ಪುತ್ತೂರಿನ ದೀಕ್ಷಾ ಡಿ. ರೈ ಹಾಗೂ ಮಂಗಳೂರಿನ ಸಮೃದ್ದ್ ಆರ್. ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿಯ ಖ್ಯಾತ ನಟರಾದ ಅರವಿಂದ್ ಬೋಳಾರ್ ಮತ್ತು ಭೋಜರಾಜ್ ವಾಮಂಜೂರು ವಿಶೇಷ ಪಾತ್ರದ ಮೂಲಕ ಕನ್ನಡದಲ್ಲಿ ತಮ್ಮ ಝಲಕ್ ತೋರಿಸಲಿದ್ದಾರೆ. ರಮೇಶ್ ರೈ ಕುಕ್ಕುವಳ್ಳಿ ಗಮನಾರ್ಹ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರನಟಿ ನಿರೀಕ್ಷಾ ಶೆಟ್ಟಿ ಮತ್ತು ಆರ್ಯನ್ ಅವರು ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ದಿವ್ಯಾಶ್ರೀ ಹಾಗೂ ಪುಷ್ಪ ಆರ್ ನಟಿಸಿದ್ದಾರೆ ಎಂದು ಹೇಳಿದರು.
ಸಂಪೂರ್ಣವಾಗಿ ಕರಾವಳಿಯ ಕಲಾವಿದರು ಹಾಗೂ ತಂತ್ರಜ್ಞರು ಸೇರಿ ನಿರ್ಮಾಣ ಮಾಡಿರುವ ಕನ್ನಡ ಚಿತ್ರ ಇದಾಗಿದೆ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಯ ವಸ್ತುಸ್ಥಿತಿ, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಬೇಕೆಂಬ ಹೆತ್ತವರ ಬಯಕೆ, ಅದಕ್ಕಾಗಿ ಅವರು ಪಡುವ ಪಾಡು, ಇದಾವುದರ ಪರಿವೆಯೇ ಇಲ್ಲದ ಮುದ್ದು ಮಕ್ಕಳ ಮುಗ್ಧ ಪ್ರಪಂಚ, ನಗುವಿನ ಲೋಕದಲ್ಲಿ ತೇಲಿಸುವ ಹಾಸ್ಯ ಸನ್ನಿವೇಶಗಳು, ಮನಕಲಕುವ ಸೆಂಟಿಮೆಂಟ್ಸ್, ಗಂಭೀರ ಕಥಾನಕವನ್ನೊಳಗೊಂಡು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಮನರಂಜನೆಯ ಪಾಕವೇ ಪೆನ್ಸಿಲ್ ಬಾಕ್ಸ್ ಎಂದು ಅವರು ತಿಳಿಸಿದರು.
ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು ಅವರೇ ಹಾಡಿಗೆ ಸಾಹಿತ್ಯ ಬರೆದಿದ್ದು, ಸರಿಗಮಪ ಖ್ಯಾತಿಯ ಡಾ.ಅಭಿಷೇಕ್ ರಾವ್, ವೈಷ್ಣವಿ ಮಣಿಪಾಲ್, ಕ್ಷಿತಿ ಕೆ ರೈ ಧರ್ಮಸ್ಥಳ, ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ ಹಾಗೂ ಜನ್ಯ ಪ್ರಸಾದ್ ಅವರು ಹಾಡಿದ್ದಾರೆ. ಚಿತ್ರದ ಕ್ಲೈಮಾಕ್ಸ್‍ನಲ್ಲಿ ಬರುವ ಅದ್ಭುತ ನೃತ್ಯ ವೈಭವ ಚಿತ್ರದ ಹೈಲೆಟ್ ಆಗಲಿದ್ದು, ಮೋಹನ್ ಪಡ್ರೆ ಅವರ ಕ್ಯಾಮರ ಕೈಳಕ, ಡಿಪಿನ್ ದಿವಾಕರ್ ಸಂಕಲನ ಈ ಚಿತ್ರಕ್ಕೆ ಇದೆ. ಜಯಕಾರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ನಿತಿನ್ ಕುಮಾರ್ ಅವರು ಹಿನ್ನಲೆ ಸಂಗೀತ ಒದಗಿಸಿದ್ದಾರೆ.ಎಸ್.ಪಿ.ಸೆಲ್ವಂ, ಸುಜಿತ್ ಎಸ್.ಪಾಟಾಳಿ, ಅಕ್ಷತ್ ವಿಟ್ಲ ಅವರು ಸಹನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೆನ್ಸಿಲ್ ಬಾಕ್ಸ್ ಚಿತ್ರದ ನಿದೇಶಕ ರಝಾಕ್ ಪುತ್ತೂರು, ಚಿತ್ರದ ನಾಯಕಿ ದೀಕ್ಷಾ ಡಿ. ರೈ, ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ಕೊಲ್ಯ, ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.