ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ರಾಷ್ಟ್ರ ಮಟ್ಟದ ತಂತ್ರಜ್ಞಾನ ಮೇಳ ಆಂತರ್ಯ-2024ರ ಸಮಾರೋಪ…

ವಿದ್ಯಾರ್ಥಿಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಪೂರಕವಾದ ವಿಷಯಗಳನ್ನು ಕಲಿಯುವುದು ಅತೀ ಅಗತ್ಯ - ಶರತ್ ಶ್ರೀನಿವಾಸ್...

ಪುತ್ತೂರು: ಕಾರ್ಪೊರೇಟ್ ಸಂಸ್ಥೆಗಳು ಬಯಸುವ ತಂತ್ರಜ್ಞಾನಗಳು ಪಠ್ಯಕ್ರಮದ ಮೂಲಕ ತಮ್ಮನ್ನು ತಲಪಲು ಒಂದೆರಡು ವರ್ಷಗಳು ಬೇಕಾಗುತ್ತದೆ. ಆ ಸಮಯದಲ್ಲಿ ಮತ್ತಷ್ಟು ಬೆಳವಣಿಗೆಗಳು ನಡೆದುಹೋಗುತ್ತದೆ. ಈ ಅಂತರವನ್ನು ಕಡಿಮೆ ಮಾಡಲು ವಿದ್ಯಾರ್ಥಿಗಳು ಪೂರಕ ವಿಷಯಗಳನ್ನು ಕಲಿಯುವುದು ಅತೀ ಅಗತ್ಯ ಎಂದು ಪುತ್ತೂರಿನ ವೆಬ್ ಪೀಪಲ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಶ್ರೀನಿವಾಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ಆಶ್ರಯದಲ್ಲಿ ನಡೆದ ರಾಷ್ಟ್ರ ಮಟ್ಟದ ತಂತ್ರಜ್ಞಾನ ಮೇಳ ಆಂತರ್ಯ-2024ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂಟರ್ನೆಟ್, ವೃತ್ತಪತ್ರಿಕೆಗಳು, ಆನ್ಲೈನ್ ಕೋರ್ಸುಗಳು, ವಿಚಾರಸಂಕಿರಣಗಳು, ಕಾರ್ಯಾಗಾರಗಳು ಮುಂತಾದವುಗಳಿಂದ ನಾವು ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಬಹುದು. ಕಲಿಯುವುದನ್ನು ಸರಿಯಾಗಿ ಕಲಿತು ಪರಿಣತರಾದರೆ ಅದು ಜೀವನದ ಔನ್ನತ್ಯಕ್ಕೆ ದಾರಿಯಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ವಿದ್ಯಾರ್ಥಿಗಳ ಉನ್ನತಿಗಾಗಿ ಪಾಠ, ಪಠ್ಯೇತರ ವಿಷಯಗಳು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ಕಾಲೇಜು ಪ್ರೋತ್ಸಾಹವನ್ನು ನೀಡುತ್ತದೆ. ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ ಎಂದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಶುಭ ಹಾರೈಸಿದರು. ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್, ವಿದ್ಯಾರ್ಥಿ ಪ್ರತಿನಿಧಿ ಅನಿರುದ್ಧ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಸ್ನಾತಕ ವಿಭಾಗದಲ್ಲಿ ಎಸ್‍ಡಿಎಂ ಕಾಲೇಜು ಉಜಿರೆ ಪ್ರಥಮ ಹಾಗೂ ಸೈಂಟ್ ಫಿಲೋಮಿನ ಕಾಲೇಜು ಪುತ್ತೂರು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡವು.
ಸ್ನಾತಕೋತ್ತರ ವಿಭಾಗದಲ್ಲಿ ಎನ್‍ಎಂಎಎಂಐಟಿ ನಿಟ್ಟೆ ಪ್ರಥಮ ಹಾಗೂ ಸೈಂಟ್ ಆಗ್ನೇಸ್ ಕಾಲೇಜು ಮಂಗಳೂರು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.
ಎಂಸಿಎ ವಿಭಾಗದ ಪ್ರೊ.ರಮೇಶ್ ಸ್ವಾಗತಿಸಿ, ವಿದ್ಯಾರ್ಥಿ ಪ್ರತಿನಿಧಿ ಅನಿರುದ್ದ್ ವಂದಿಸಿದರು. ಸಂಕೇತ್ ಹಾಗೂ ಶರಣ್ಯ ಕಾರ್ಯಕ್ರಮ ನಿರ್ವಹಿಸಿದರು.

antarya (2)

antarya (3)

antarya (4)

Sponsors

Related Articles

Back to top button