ಅಯನಾ ವಿ ರಮಣ್ ಗೆ ಕೇಂದ್ರ ಸರಕಾರದ ಸ್ಕಾಲರ್ ಶಿಪ್…
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಅಯನಾ ವಿ ರಮಣ್ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯದ ಮೆರಿಟ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ದ್ವಿತೀಯ ಪಿಯುಸಿ ಯಲ್ಲಿ ಶೇ.95 ಅಂಕ ಗಳಿಸಿದ ಹಿನ್ನಲೆಯಲ್ಲಿ ಪದವಿ ಅಧ್ಯಯನಕ್ಕಾಗಿ ಕೊಡಲ್ಪಡುವ ಈ ಸ್ಕಾಲರ್ ಶಿಪ್ ಮೊತ್ತದಲ್ಲಿ ಮೊದಲ ವರ್ಷದ ರೂ.10 ಸಾವಿರ ಈಗಾಗಲೇ ಅಯನಾ ಖಾತೆಗೆ ನೇರ ಜಮಾವಣೆಯಾಗಿದೆ. ಮುಂದಿನ ಎರಡು ವರ್ಷ ಇಷ್ಟೇ ಮೊತ್ತ ದೊರಕಲಿದೆ.
ಆಳ್ವಾಸ್ ನಲ್ಲಿ ಮೆರಿಟ್ ದತ್ತು ಸ್ವೀಕಾರದ ವಿದ್ಯಾರ್ಥಿಯಾಗಿ ಪ್ರಥಮ ಪದವಿ ಓದುತ್ತಿರುವ ಅಯನಾ 8 ನೇ ತರಗತಿಯಿಂದ ನಿರಂತರ 5 ವರ್ಷ ಸಾಂಸ್ಕೃತಿಕ ದತ್ತು ಸ್ವೀಕಾರದ ವಿದ್ಯಾರ್ಥಿಯೂ ಆಗಿದ್ದರೆನ್ನುವುದು ಗಮನಾರ್ಹ. ತನ್ನ ಭರತನಾಟ್ಯದ ಸಾಧನೆಗಾಗಿ ಕೇಂದ್ರ ಸರಕಾರದ ಸಿ ಸಿ ಆರ್ ಟಿ ( ಸೆಂಟರ್ ಫ಼ಾರ್ ಕಲ್ಚರಲ್ ರಿಸೋರ್ಸಸ್ ಆಂಡ್ ಟ್ರೈನಿಂಗ್ ) ಯಿಂದ ನಿರಂತರ 8 ವರ್ಷ ಶಿಷ್ಯ ವೇತನ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸ್ಕಾಲರ್ ಶಿಪ್ ಪಡೆದಿರುತ್ತಾರೆ.
ಬಹುಮುಖ ಪ್ರತಿಭೆಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಅಯನಾ ಆಳ್ವಾಸ್ ನಲ್ಲಿ ಉಪನ್ಯಾಸಕಿಯಾಗಿರುವ ಡಾ| ಮುಕಾಂಬಿಕ ಜಿ ಎಸ್, ಕಲಾವಿದ ಕೆ.ವಿ. ರಮಣ್ ದಂಪತಿಯ ಪುತ್ರಿ.