ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸಂಶುದ್ದೀನ್ ಸಂಪ್ಯ……
ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕನ್ನಡ ಪ್ರಭ ಪತ್ರಿಕೆಯ ಪುತ್ತೂರು ವರದಿಗಾರ ಸಂಶುದ್ದೀನ್ ಸಂಪ್ಯ ಆಯ್ಕೆಯಾಗಿದ್ದಾರೆ.
ಅವರು ಕಳೆದ 17 ವರ್ಷಗಳಿಂದ ಪತ್ರಕರ್ತರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿ ರಾಜ್ಯದಾದ್ಯಂತ ಕೆಲಸ ಮಾಡಿದ್ದಾರೆ. ವಾರ್ತಾಭಾರತಿ ಮತ್ತು ಕನ್ನಡ ಪ್ರಭ ಪತ್ರಿಕೆಯ ಪುತ್ತೂರು ವರದಿಗಾರರಾಗಿದ್ದಾರೆ. ಕುಡ್ಲ ದರ್ಶನ, ದಾಸ್ ಪ್ರಕಾಶ್ ಮತ್ತು ಸಹಾಯ ಟಿವಿ ಚಾನೆಲ್‌ನಲ್ಲಿ ಸುಮಾರು ೧೨ ವರ್ಷಗಳ ಕಾಲ ವಾರ್ತಾ ವಾಚಕರಾಗಿ ಕೆಲಸ ಮಾಡಿದ್ದಾರೆ. ಸುಳ್ಯ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ.
1991 ರಲ್ಲಿ ನಡೆದ ಸಾಕ್ಷರತಾ ಆಂದೋಲನದಲ್ಲಿ ಮುಖ್ಯ ಸ್ವಯಂಸೇವಕರಾಗಿ ಬಳಿಕ ಜಾರಿಗೆ ಬಂದ ವಯಸ್ಕರ ನಿರಂತರ ಶಿಕ್ಷಣ ಯೋಜನೆಯಲ್ಲಿ ಪ್ರೇರಕರಾಗಿ, ಮುಂದುವರಿಕಾ ಶಿಕ್ಷಣ ಯೋಜನೆಯಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಬುಡಕಟ್ಟು ಕೊರಗ ಸಮುದಾಯದ ಸಂಘಟಕರಾಗಿ ತಾಲೂಕು ಕೊರಗರ ಅಭಿವೃದ್ಧಿ ಸಂಘವನ್ನು ಸ್ಥಾಪಿಸಿ, ಕೊರಗರ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗಾರಿ ೬ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಮೈಸೂರಿನ ಆರ್‌ಎಲ್‌ಎಚ್‌ಪಿ ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ ಕಾರ್ಯಕರ್ತರಾಗಿ ಕೆಲಸ ಕಾಲ ಕೊಳಚೆ ನಿವಾಸಿಗಳ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಕೆಲಸ ಮಾಡಿದ್ದಾರೆ. ೬ ವರ್ಷಗಳ ಕಾಲ ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾಗಿ ಪ್ರಾಥಮಿಕ ಶಾಲಾ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಕೆಲಸ ಮಾಡಿದ್ದಾರೆ. ಸಂಸಾರ(ಸಂಘಟನೆಗಾಗಿ ಸಾಮಾಜಿಕ ರಂಗಭೂಮಿ) ಎಂಬ ರಂಗತಂಡವನ್ನು ರಚಿಸಿ ಆ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ, ಮಹಿಳಾ ಹಕ್ಕುಗಳ ಬಗ್ಗೆ, ಆರೋಗ್ಯದ ಬಗ್ಗೆ, ಶಿಕ್ಷಣದ ಬಗ್ಗೆ, ದುಶ್ಚಟ ದುರಾಭ್ಯಾಸಗಳ ವಿರುದ್ದ, ಏಡ್ಸ್ ವಿರುದ್ದ, ಲಿಂಗ ಅಸಮಾನತೆ ವಿರುದ್ದ ಸಾಮಾಜಿಕ ಅಸಮಾನತೆ ವಿರುದ್ದ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಎಸ್‌ಡಿಎಂಸಿಗಳಿಗೆ ಅವರ ಅಧಿಕಾರ, ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ತರಬೇತುದಾರರಾಗಿ ತರಬೇತಿ ನೀಡಿದ್ದಾರೆ. ಅಲ್ಲದೆ ನಾಯಕತ್ವ ತರಬೇತಿ, ಲಿಂಗತ್ವ ಪರಿಕಲ್ಪನೆ ತರಬೇತಿ, ಕೌಶಲ್ಯಾಭಿವೃದ್ಧಿ ತರಬೇತಿ ಇನ್ನಿತರ ತರಬೇತಿಗಳಲ್ಲಿ ಹಲವು ಕಡೆಗಳಲ್ಲಿ ನಡೆಸಿಕೊಟ್ಟಿದ್ದಾರೆ. ಪಂಚಾಯತ್ ರಾಜ್ ತರಬೇತುದಾರರಾಗಿ ಜಿಲ್ಲೆಯ ಗ್ರಾಮ ಪಂಚಾಯತ್ ಸದಸ್ಯರಿಗೆ, ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ.