ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು -ವಿಚಾರ ಸಂಕಿರಣ…
ರಾಷ್ಟ್ರ ಸೇವೆ ಎನ್ನುವುದು ಒಂದು ಹೆಮ್ಮೆಯ ವಿಷಯ- ರಿಯರ್ ಅಡ್ಮಿರಲ್ ಸಿ.ಆರ್.ಪ್ರವೀಣ್ ನಾಯರ್...
ಪುತ್ತೂರು: ರಾಷ್ಟ್ರ ಸೇವೆ ಎನ್ನುವುದು ಒಂದು ಹೆಮ್ಮೆಯ ವಿಷಯ. ನಮ್ಮಲ್ಲಿ ಅಪ್ಪಟ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕಾದರೆ ನಮ್ಮ ಚಿಂತನೆ ಮತ್ತು ಮನೋಭಾವಗಳಲ್ಲಿ ಸ್ಪಷ್ಟತೆಯನ್ನು ತಂದುಕೊಳ್ಳಬೇಕು ಎಂದು ಭಾರತೀಯ ನೌಕಾಪಡೆಯ ಅಧಿಕಾರಿ ರಿಯರ್ ಅಡ್ಮಿರಲ್ ಸಿ.ಆರ್.ಪ್ರವೀಣ್ ನಾಯರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಮತ್ತು ಇನ್ಸ್ಟಿಟ್ಯೂಶನಲ್ ಇನ್ನೋವೇಶನ್ ಕೌನ್ಸಿಲ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಇಂಜಿನಿಯರಿಂಗ್ ಪದವಿಯ ನಂತರ ಎನ್ನುವ ವಿಷಯದ ಬಗೆಗಿನ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮಿಲಿಟರಿ ವ್ಯವಸ್ಥೆ ಎಂದಾಕ್ಷಣ ಕೋವಿ ಹಿಡಿದುಕೊಂಡು ಯುದ್ಧ ಭೂಮಿಗೆ ಹೋಗುವ ಕಲ್ಪನೆ ಮನಸ್ಸಿನಲ್ಲಿ ಮೂಡುವುದು ಸಹಜ. ಆದರೆ ಇದರ ಒಳ ಹೊಕ್ಕು ನೋಡಿದಾಗ ಅದರೊಳಗಿನ ಅಗಾಧವಾದ ವಿಷಯಗಳು ಬೆರಗನ್ನು ಮೂಡಿಸುತ್ತವೆ ಎಂದರು. ಇಂಜಿನಿಯರಿಂಗ್ ಪದವೀಧರರಿಗೆ ದೇಶ ಸೇವೆಯನ್ನು ಮಾಡುವುದಕ್ಕೆ ಇದರಲ್ಲಿ ವಿಪುಲವಾದ ಅವಕಾಶವಿದೆ. ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಸಿಗುವ ಸವಲತ್ತುಗಳಿಗಿಂತ ಮಿಗಿಲಾದ ಸವಲತ್ತುಗಳು ಮತ್ತು ಶಿಸ್ತಿನ ಜೀವನ ಇಲ್ಲಿ ಸಿಗುತ್ತದೆ. ಎಲ್ಲರೂ ಸಕಾರಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ದೇಶಪ್ರೇಮವನ್ನು ಮೆರೆಯೋಣ ಎಂದು ಅವರು ನುಡಿದರು.
ಸಮಾರಂಭದ ಅಧ್ಯಕತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್ ಮಾತನಾಡಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಭಾಗದಲ್ಲಿ ಅವಕಾಶಗಳು ಸಿಗುತ್ತವೆ. ಅದನ್ನು ಗಳಿಸಿ ಉಳಿಸಿಕೊಳ್ಳುವ ಜವಾಬ್ಧಾರಿ ನಮ್ಮ ಮೇಲಿದೆ, ಅದಕ್ಕಾಗಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ರಿಯರ್ ಅಡ್ಮಿರಲ್ ಸಿ.ಆರ್.ಪ್ರವೀಣ್ ನಾಯರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಭಾರತೀಯ ಸೇನಾಪಡೆಯ ನಿವೃತ್ತ ಅಧಿಕಾರಿ ಕರ್ನಲ್ ಗೋಪಾಲಕೃಷ್ಣ ದೇವಣ್ಯ, ರಿಯರ್ ಅಡ್ಮಿರಲ್ ಸಿ.ಆರ್.ಪ್ರವೀಣ್ ನಾಯರ್ ಅವರ ಪತ್ನಿ ಡಾ.ದೀಪ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರೀನಿವಾಸ್ ಹೆಗ್ಡೆ ಸ್ವಾಗತಿಸಿ, ಕನಿಶ್ ಗಂಗಾ ವಂದಿಸಿದರು. ರಚನಾ.ಕೆ.ಡಿ ಕಾರ್ಯಕ್ರಮ ನಿರ್ವಹಿಸಿದರು.