ತಾಳಮದ್ದಳೆ ಸಪ್ತಾಹ ಸಮಾರೋಪ – ಕೆ.ಎಸ್.ಮಂಜುನಾಥರಿಗೆ ಯಕ್ಷಾಂಗಣ ಪ್ರಶಸ್ತಿ…
ಕಲೆಯಿಂದ ಬದುಕಿಗೆ ಮೌಲ್ಯ: ಚಿತ್ತರಂಜನ್ ಬೋಳಾರ...
ಮಂಗಳೂರು: ‘ಕಲಾವಿದ ತನ್ನ ನೈಪುಣ್ಯವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡದೆ ಕಲೆಯ ಶ್ರೀಮಂತಿಕೆ ಹೆಚ್ಚಿಸಲು ಪ್ರಯತ್ನಿಸಬೇಕು. ಕಲೆ ತನ್ನ ಬದುಕಿಗೆ ಮೌಲ್ಯ ತಂದು ಕೊಟ್ಟಿದೆ ಎಂಬ ವಿನಯದಿಂದ ಅದನ್ನು ಆರಾಧಿಸಿದರೆ ಹೆಸರು, ಖ್ಯಾತಿ ತಾನಾಗಿ ಬರುತ್ತದೆ’ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುತ್ತಿದ್ದ 12ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದ ಸಮಾರೋಪ ಸಮಾರಂಭದಲ್ಲಿ ನ. 17ರಂದು ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಬ್ಯಾಂಕ್ ಮಹಾಪ್ರಬಂಧಕಿ ಸುಮನಾ ಘಾಟೆ ‘ಗಾನ,ನೃತ್ಯ, ಮಾತು, ಬಣ್ಣ ಗಾರಿಕೆ ಹಾಗೂ ವೇಷಭೂಷಣಗಳಿಂದ ರಂಜಿಸುವ ಯಕ್ಷಗಾನ ಕಲೆ ಕರಾವಳಿಯ ಹೆಮ್ಮೆ. ಅದರಲ್ಲೂ ತಾಳಮದ್ದಳೆಗೆ ಮಾತೇ ಬಂಡವಾಳ. ಶಾಸ್ತ್ರಾರ್ಥ ಮತ್ತು ಪುರಾಣ ಜ್ಞಾನಗಳಿಂದ ಮೇಳೈಸಿ ಕಲಾವಿದರು ತಮ್ಮ ಗತ್ತು, ಗಾಂಭೀರ್ಯ ಮತ್ತು ಸ್ವರ ಸಾಮರ್ಥ್ಯದಿಂದ ಪುರಾಣ ಜಗತ್ತನ್ನು ಸಾಕಾರಗೊಳಿಸುತ್ತಾರೆ’ ಎಂದರು. ಉದ್ಯಮಿ ಎ.ಕೆ.ಜಯರಾಮ ಶೇಖ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ :
ಹವ್ಯಾಸಿ ಯಕ್ಷಗಾನ ಭಾಗವತ, ಪ್ರಸಂಗಕರ್ತ ಹಾಗೂ ವಚನ ಸಾಹಿತಿ ಕೆ.ಎಸ್. ಮಂಜುನಾಥ ಶೇರಿಗಾರ್ ಹರಿಹರಪುರ ಅವರಿಗೆ 2024ನೇ ಸಾಲಿನ ಯಕ್ಷಾಂಗಣ ಗೌರವ ಪ್ರಶಸ್ತಿ – 2024 ನೀಡಿ ಸತ್ಕರಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಿದರು. ‘ತಾಳಮದ್ದಳೆ ಸಪ್ತಾಹವನ್ನು ಒಂದು ಜ್ಞಾನಸತ್ರದಂತೆ ವರ್ಷಂಪ್ರತಿ ನವೆಂಬರ್ ತಿಂಗಳಲ್ಲಿ ನಡೆಸುತ್ತಿರುವ ಯಕ್ಷಾಂಗಣ ನಿಜವಾದ ಕನ್ನಡದ ನುಡಿ ಸೇವೆ ಮಾಡುತ್ತಿದೆ’ ಎಂದವರು ಶ್ಲಾಘಿಸಿದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಮ್ಮ ಸ್ವಾಗತ ಭಾಷಣದಲ್ಲಿ ದ್ವಾದಶ ಸರಣಿಯ ನುಡಿಹಬ್ಬ ತಾಳಮದ್ದಳೆ ಸಪ್ತಾಹದ ಯಶಸ್ಸಿನಲ್ಲಿ ವಿಶೇಷ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿ ಸನ್ಮಾನಿತ ಮಂಜುನಾಥರನ್ನು ಅಭಿನಂದಿಸಿ ಮಾತನಾಡಿದರು. ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್, ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ಹಾಗೂ ಪದಾಧಿಕಾರಿಗಳಾದ ಸಿದ್ಧಾರ್ಥ ಅಜ್ರಿ, ರಾಜಾರಾಮ ಶೆಟ್ಟಿ, ದಾಸಪ್ಪ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು.
‘ಸತೀ ಶಕುಂತಳೆ’ ತಾಳಮದ್ದಳೆ :
ಸಪ್ತಾಹದ ಕೊನೆಯ ಕಾರ್ಯಕ್ರಮವಾಗಿ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರಿಂದ ‘ಸತೀ ಶಕುಂತಳೆ’ ಯಕ್ಷಗಾನ ತಾಳಮದ್ದಳೆ ಜರಗಿತು. ಕೂಡ್ಲು ಮಹಾಬಲ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬಳೆ, ಹರೀಶ ಬಳಂತಿಮೊಗರು, ರಮೇಶ ಸಾಲ್ವಣ್ಕರ್, ಉಮೇಶ ಆಚಾರ್ಯ ಗೇರುಕಟ್ಟೆ, ದಿನೇಶ್ ಶೆಟ್ಟಿ ಅಳಿಕೆ, ಕೆ.ಎಸ್. ಮಂಜುನಾಥ್, ವಿಜಯಶಂಕರ ಆಳ್ವ ಮಿತ್ತಳಿಕೆ, ಆಜ್ಞಾ ಸೋಹಂ ವರ್ಕಾಡಿ ವಿವಿಧ ಪಾತ್ರಗಳಲ್ಲಿ ಅರ್ಥವಾದಿಗಳಾಗಿ ಭಾಗವಹಿಸಿದರು. ಪ್ರಶಾಂತ ರೈ ಪುತ್ತೂರು ಅವರ ಭಾಗವತಿಗೆ ಕೋಳ್ಯೂರು ಭಾಸ್ಕರ, ಹರಿಶ್ಚಂದ್ರ ನಾಯಗ ಮಾಡೂರು ಮತ್ತು ಸತ್ಯಜಿತ್ ರಾವ್ ರಾಯಿ ಹಿಮ್ಮೇಳದಲ್ಲಿ ಸಹಕರಿಸಿದರು.