ಜನಪ್ರತಿನಿಧಿಗಳಿಗೆ ಚಿಂತನ ಮಂಥನ ಕಾರ್ಯಕ್ರಮ…
ಬಂಟ್ವಾಳ: ಸ್ಪರ್ಶ ಕಲಾ ಮಂದಿರದಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಿಗಾಗಿ ಚಿಂತನ ಮಂಥನ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿರುವ 6021 ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಲ್ಲದೆ ಸ್ವಚ್ಚ ಭಾರತ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು. ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಕೊರತೆಯನ್ನು ಸೋಲಾರ್ ವಿದ್ಯುತ್ ಉತ್ಪಾದನೆಯ ಮೂಲಕ ನೀಗಿಸಲಾಗುವುದು ಎಂದು ತಿಳಿಸಿದರು.
ಮುಜರಾಯಿ ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿ ಪಂಚಾಯತ್ ಸದಸ್ಯರುಗಳಿಗೆ ದುಪ್ಪಟ್ಟು ಸಂಬಾವನೆ ನೀಡಬೇಕು, ಗ್ರಂಥಾಲಯ ನೌಕರರಿಗೆ ಪೂರ್ಣಾವಧಿ ಉದ್ಯೋಗ ನೀಡಬೇಕು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಚಿವರನ್ನು ಆಗ್ರಹಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ತಹಶೀಲ್ದಾರ್ ರಶ್ಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್.ಸೆಲ್ವಂಮಣಿ, ಬಂಟ್ವಾಳ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮೊದಲಾದವರು ಉಪಸ್ಥಿತರಿದ್ದರು. ಗಾಂಧಿಗ್ರಾಮ ಪುರಸ್ಕಾರ ಪಡೆದ ವಿಟ್ಲ ಪಡ್ನೂರು ಗ್ರಾ.ಪಂ ಅಧ್ಯಕ್ಷ ರವೀಶ್ ಶೆಟ್ಟಿ, ಕೊಲ್ನಡು ಗ್ರಾ.ಪಂ ಅಧ್ಯಕ್ಷ ಸುಭಾಶ್ ಚಂದ್ರ ಶೆಟ್ಟಿ ಗ್ರಾಮದ ಅಭೀವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.