ಗಾಂಧಿನಗರ ಎಂಜೆಎಂ ಮಯ್ಯಿತ್ ಪರಿಪಾಲನಾ ಕೇಂದ್ರಕ್ಕೆ ವಕ್ಫ್ ನಿಂದ ಬಾಡಿ ಫ್ರೀಜರ್ ಕೊಡುಗೆ ಹಸ್ತಾoತರ…
ಸುಳ್ಯ: ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ಗಾಂಧಿನಗರ ಸುಳ್ಯ ಇದರ ಅಧೀನದಲ್ಲಿ ಬೇರೆ ಬೇರೆ ಕಡೆಗಳಿಂದ ತರುವ ಪಾರ್ಥಿವ ಶರೀರಗಳ ಮರಣಾನಂತರದ ಧಾರ್ಮಿಕ ಕ್ರಿಯೆಗಳನ್ನು ಸಂಪ್ರದಾಯದಂತೆ ನೆರವೇರಿಸಲು ಸುಸಜ್ಜಿತ ವಾದ ಮಯ್ಯಿತ್ ಪರಿಪಾಲನ ಕೇಂದ್ರ ಕಾರ್ಯಚರಿಸುತ್ತಿದೆ. ಅಪಘಾತ ಇನ್ನಿತರ ಸಂದರ್ಭಗಳಲ್ಲಿ ದೂರದ ಊರುಗಳಿಗೆ ಮೃತದೇಹಗಳನ್ನು ಉಚಿತವಾಗಿ ಪರಿಪಾಲನೆ ಮಾಡುವ ಕೇಂದ್ರ ಇದಾಗಿರುತ್ತದೆ. ಮೃತ ದೇಹಗಳನ್ನು ಅವಶ್ಯಕತೆಯಂತೆ ಕೆಲ ಸಮಯದವರೆಗೆ ಫ್ರೀಜರ್ ನಲ್ಲಿ ಸಂರಕ್ಷಣೆ ಮಾಡಲು ಸೌಲಭ್ಯಗಳು ಇರುವುದಿಲ್ಲ. ಇದನ್ನು ಮನಗಂಡು ಸದ್ರಿ ಕೇಂದ್ರಕ್ಕೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ವತಿಯಿಂದ ದ. ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಮೂಲಕ ಉಚಿತವಾಗಿ ಬಾಡಿ ಫ್ರೀಜರ್ ನ್ನು ಒದಗಿಸಲಾಗಿರುತ್ತದೆ. ಮಂಗಳೂರಿನ ಜಿಲ್ಲಾ ವಕ್ಫ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇದನ್ನು ವಿತರಿಸಲಾಯಿತು, ಗಾಂಧಿನಗರ ಮಸ್ಜಿದ್ ಪರವಾಗಿ ಮಾಜಿ ಅಧ್ಯಕ್ಷ ಕೆ. ಎಂ. ಮುಸ್ತಫ, ಜತೆ ಕಾರ್ಯದರ್ಶಿ, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದ. ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಜಮಾಲ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ಸದಸ್ಯ ಸೈದುದ್ದಿನ್ ಮೊದಲಾದವರು ಉಪಸ್ಥಿತರಿದ್ದರು.
ಗಾಂಧಿನಗರ ಮಯ್ಯಿತ್ ಪರಿಪಾಲನಾ ಕೇಂದ್ರದಲ್ಲಿರುವ ಫ್ರೀಜರ್ ಸೌಲಭ್ಯವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುವುದು ಎಂದು ಕೆ. ಎಂ. ಮುಸ್ತಫ ತಿಳಿಸಿದರು.