ಕನ್ನಡ ಚುಟುಕು ಸಾಹಿತ್ಯ ಪರಿಷತ್-ಡಾ. ಕೊಳ್ಚಪ್ಪೆ ಗೋವಿಂದ ಭಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಆಯ್ಕೆ…

ಬಂಟ್ವಾಳ ಮಾ. 5 : ಕಾಸರಗೋಡು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ -ಸಂಧ್ಯಾರಾಣಿ ದಂಪತಿಗಳು ಸ್ಥಾಪಿಸಿದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಘಟಕದ “ಕೀರಿಕಾಡು ಮಾಸ್ಟರ್ ವಿಷ್ಣು ಭಟ್ “ಸಂಸ್ಮರಣೆ ಹಾಗೂ ಚುಟುಕು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾಗಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ , ಕಾರ್ಯದರ್ಶಿಯಾಗಿ ಅಪೂರ್ವ ಕಾರಂತ್ ಪುತ್ತೂರು ಇವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಚು. ಸಾ. ಪ. ಕರ್ನಾಟಕ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ ನಾಮನಿರ್ದೇಶನ ಮಾಡಿದರು. ಇನ್ನೊರ್ವ ಸಂಚಾಲಕರಾದ ಡಾ. ಶಾಂತ ಪುತ್ತೂರು ಇವರು ಅನುಮೋದಿಸಿದರು. ಸರ್ವಾನುಮತದಿಂದ ಆಯ್ಕೆಯಾದ ಡಾ. ಕೆ. ಗೋವಿಂದ ಭಟ್ ಮತ್ತು ಅಪೂರ್ವ ಕಾರಂತ್ ಇವರಿಗೆ ಸಂಸ್ಥೆಯ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಹಾಗೂ ಗೌರವ ಅಧ್ಯಕ್ಷರಾದ ಶಿಕ್ಷಣ ತಜ್ಞ, ಸಾಹಿತಿ ವಿ. ಬಿ. ಕುಲಮರ್ವ ಕನ್ನಡ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಅಪೂರ್ವ ಕಾರಂತ್ ಇವರಿಗೆ ಶಾಲು ಹೊದಿಸಿ, ಅಧಿಕಾರ ಪತ್ರ, ಕಾರ್ಯಸೂಚಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷರಾದ ವಿರಾಜ್ ಅಡೂರ್, ಕೋಶಾಧಿಕಾರಿ ಸಂಧ್ಯಾರಾಣಿ, ಸಂಘಟನಾ ಕಾರ್ಯದರ್ಶಿ ಶಾರದಾ ಮೊಳೆಯಾರ್, ಕರ್ನಾಟಕ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ, ಕರ್ನಾಟಕ ರಾಜ್ಯ ಸಂಚಾಲಕಿ ಡಾ ಶಾಂತ ಪುತ್ತೂರು ಜತೆಗಿದ್ದರು. ಅಧ್ಯಕ್ಷ ಸ್ಥಾನ ಸ್ವೀಕರಿಸಿದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ತಮ್ಮ ಕೃತಜ್ಞತಾ ಭಾಷಣದಲ್ಲಿ “ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ಶೀಘ್ರದಲ್ಲಿ ವಿಸ್ತರಿಸಿ ಬರುವ ಏಪ್ರಿಲ್ ತಿಂಗಳಲ್ಲಿ 100ಮಂದಿ ಚುಟುಕು ಕವಿಗಳ ಕವಿಗೋಷ್ಠಿಯೊಂದಿಗೆ ಮಂಗಳೂರಿನಲ್ಲಿ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಡಾ ಕೊಳ್ಚಪ್ಪೆ ಗೋವಿಂದ ಭಟ್ ಸಾಹಿತ್ಯ ಪರಿಚಾರಕರಾಗಿ ಹೊಸ ಬರಹಗಾರರನ್ನು ಬೆಳೆಸುವ ಪ್ರವೃತ್ತಿಯಲ್ಲಿ ತೊಡಗಿದ್ದಾರೆ. ” ಹೊಸ ಬರಹಗಾರರ ಕೈಪಿಡಿ” ಅವರು ಮತ್ತು ಮಂಜೇಶ್ವರ ಲಕ್ಷ್ಮಿ ವಿ ಭಟ್ ಅದೇ ಉದ್ದೇಶಕ್ಕಾಗಿ ಬರೆದ ಮಾರ್ಗದರ್ಶಿ ಕೈಪಿಡಿಯಾಗಿದೆ. ಬ್ಯಾಂಕ್ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯ ಕೈಂಕರ್ಯದಲ್ಲಿ ತೊಡಗಿರುವ ಇವರು 16 ಕೃತಿಗಳನ್ನು ಪ್ರಕಟಿಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಾವಿರ ಕವಿಗಳ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದಾರೆ.
ಪುತ್ತೂರಿನ ಅಪೂರ್ವ ಕಾರಂತ ಇಂಜಿನಿಯರಿಂಗ್ ಪದವೀಧರೆ ಮತ್ತು ವೃತ್ತಿ ನಿರತೆ. ಕವಯತ್ರಿ ಮತ್ತು ನಿರೂಪಕಿ.
ಹೊಸತಾಗಿ ನಿಯೋಜಿತರಾದ ಈ ತಂಡದ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಘಟಕವು ಹೆಚ್ಚಿನ ಸಾಧನೆ ಮಾಡಲಿ ಎಂದು ಸಾಹಿತ್ಯಾಸಕ್ತರು ಶುಭ ಹಾರೈಸಿದರು.