ಕೊರೋನಾ ಭೀತಿ – ಮಂಗಳೂರು ಪೊಲೀಸ್ ಕಮಿಷನರ್ ಗೆ ಕರೆ ಮಾಡಿ ದಂಪತಿ ಆತ್ಮಹತ್ಯೆ…
ಮಂಗಳೂರು: ಕೊರೋನಾ ಸಾಂಕ್ರಾಮಿಕ ಸೋಂಕಿನ ಭೀತಿಯಿಂದ ಯುವ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಕುಳಾಯಿಯಲ್ಲಿ ನಡೆದಿದೆ.ಮಂಗಳೂರು ಕುಳಾಯಿ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ರಮೇಶ್ ಸುವರ್ಣ ಮತ್ತು ಅವರ ಪತ್ನಿ ಗುಣ ಆರ್ ಸುವರ್ಣ ಮೃತ ದುರ್ದೈವಿಗಳು.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಂಗಳೂರು ಉತ್ತರ ವಲಯ ಶಾಸಕ ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರಿಗೆ ಆಡಿಯೊ ಮೂಲಕ ಮನವಿ ಮಾಡಿಕೊಂಡಿದ್ದ ದಂಪತಿ, ತಮ್ಮ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದ ಪ್ರಕಾರ ನೆರವೇರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಪತ್ನಿಗೆ ಕೊರೋನಾ ಸೋಂಕಿನ ಲಕ್ಷಣಗಳಾದ ಜ್ವರ, ತಲೆನೋವು, ಸುಸ್ತು ಮತ್ತು ಉಸಿರಾಟದ ಸಮಸ್ಯೆ ಕಾಣುತ್ತಿದ್ದು ತಮಗೂ 5 ದಿನಗಳ ನಂತರ ಈ ಲಕ್ಷಣಗಳು ಕಂಡುಬಂದವು. ತೀವ್ರ ಸಕ್ಕರೆ ಕಾಯಿಲೆಯಿಂದ ನನ್ನ ಪತ್ನಿ ಬಳಲುತ್ತಿದ್ದಾಳೆ. ಡಯಾಬಿಟಿಸ್ ರೋಗಿಗಳಿಗೆ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆಯಿದ್ದು ಕಾಲನ್ನು ತೆಗೆಯಬೇಕಾದ ಪರಿಸ್ಥಿತಿ ಬರಬಹುದು ಎಂದು ನನ್ನ ಪತ್ನಿ ತೀವ್ರ ಭೀತಿಗೊಳಗಾಗಿದ್ದಾಳೆ. ಕಳೆದ ಮೂರು ದಿನಗಳಿಂದ ತೀವ್ರ ನೊಂದು ಹೋಗಿದ್ದಾಳೆ. ಆಸ್ಪತ್ರೆಗೆ ಹೋಗಲು ಅವಳಿಗೆ ಭಯವಾಗುತ್ತಿದೆ. ಆಸ್ಪತ್ರೆಗೆ ಹೋದರೆ ಮರಳಿ ಸುರಕ್ಷಿತವಾಗಿ ಬರುವೆನು ಎಂದು ಧೈರ್ಯವಿಲ್ಲ ಎನ್ನುತ್ತಿದ್ದಾಳೆ ಎಂದು ಆಡಿಯೊ ಸಂದೇಶದಲ್ಲಿ ರಮೇಶ್, ನಗರ ಪೊಲೀಸ್ ಆಯುಕ್ತರಲ್ಲಿ ಹೇಳಿಕೊಂಡಿದ್ದಾರೆ.
ಈಗ ನಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಶರಣ್ ಪಂಪ್‌ವೆಲ್, ಭರತ್ ಶೆಟ್ಟಿ ಮತ್ತು ನಳಿನ್ ಕುಮಾರ್ ಕಟೀಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರ ಅಂತ್ಯ ಸಂಸ್ಕಾರದ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ. ನನ್ನ ವಯಸ್ಸಾದ ಪೋಷಕರು ಮತ್ತು ಕುಟುಂಬ ಸದಸ್ಯರು ನಮ್ಮಿಂದ ತೊಂದರೆಗೊಳಗಾಗದಿರಲಿ ಎಂದು ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ಸಿಕ್ಕಿದ ಕೂಡಲೇ ಅವರು ದೂರವಾಣಿ ಕರೆ ಮಾಡಿ ಬದುಕಲ್ಲಿ ಇಂತಹ ಕಠಿಣ ಕ್ರಮ ತೆಗೆದುಕೊಳ್ಳದಿರುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಬರುವಷ್ಟರ ಹೊತ್ತಿಗೆ ದಂಪತಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಪೊಲೀಸರಿಗೆ ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದೆ ಎನ್ನಲಾಗಿದೆ.