ಕಾನೂನು ಮಾಹಿತಿ ಕಾರ್ಯಕ್ರಮ:ಅಹಿಂಸೆಯ ದಾರಿಯಲ್ಲಿ ಜಗತ್ತು ಗೆದ್ದವರು ಗಾಂಧೀಜಿ-ನ್ಯಾ. ಮಂಜುನಾಥ…

ಪುತ್ತೂರು: ಕಷ್ಟದ ದಿನಗಳಲ್ಲೂ ಸರಳ ಜೀವನ ನಡೆಸಿ ಜಗತ್ತಿಗೆ ಮಾದರಿಯಾದ ಗಾಂಧೀಜಿ ಅವರು ಅಹಿಂಸೆಯ ದಾರಿಯಲ್ಲಿ ಜಗತ್ತನ್ನು ಗೆದ್ದರು. ವಿವಿಧತೆಯಲ್ಲಿ ಏಕತೆ ಕಾಣುವ ಈ ದೇಶದಲ್ಲಿ ಗಾಂಧೀಜಿಯವರ ತತ್ವಗಳನ್ನು ಅನುಭವಿಸೋಣ ಎಂದು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಮಂಜುನಾಥ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ನ್ಯಾಯವಾದಿಗಳ ಸಂಘ ಪುತ್ತೂರು ಮತ್ತು ಮಹಿಳಾ, ಮಕ್ಕಳ ಅಭಿವೃದ್ದಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಗಾಂಧಿ ಜಯಂತಿಯ ಅಂಗವಾಗಿ ನಮ್ಮ ಪರಿಸರ ಮತ್ತು ಸ್ವಚ್ಛತೆ ಎಂಬ ವಿಷಯದ ಕುರಿತು ಬಪ್ಪಳಿಗೆ ಶಾರದಾ ಭವನದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿ ಸತ್ಯ, ಸ್ವಚ್ಛತೆ, ಅಹಿಂಸೆಯ ಮಾರ್ಗದಲ್ಲಿ ನಡೆದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯವರು ದೇಶದ ಶಕ್ತಿ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಭಾಸ್ಕರ ಕೋಡಿಂಬಾಳ ಮಾತನಾಡಿ ತನಗಾಗದವರನ್ನು ಪ್ರೀತಿಸುವ ಗುಣವನ್ನು ಇಟ್ಟು ಕೊಂಡ ಗಾಂಧೀಜಿ ಅವರು ವಿರೋಧಿಗಳ ಮನ ಪರಿವರ್ತನೆ ಮಾಡುವ ಮೂಲಕ ಯಾರಿಗೂ ಕೇಡು ಬಯಸಿಲ್ಲ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಅವರು ತನ್ನ ಸ್ವಾಗತಕ್ಕಾಗಿ ಅಲಂಕರಿಸಿ ಬಳಿಕ ಉಂಟಾದ ಕಸಗಳನ್ನು ತಾನೆ ಗುಡಿಸಿ ಸ್ವಚ್ಛತೆಗೆ ಮಾದರಿಯಾದರು. ಈ ನಿಟ್ಟಿನಲ್ಲಿ ಗಾಂಧಿ ಜಯಂತಿಯಂದು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಯಂತಿಯಂದೇ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಆರಂಭದ ಹಿನ್ನೆಲೆಯಲ್ಲಿ ಮಕ್ಕಳ ಕುರಿತು ವಿಶೇಷ ಮಾಹಿತಿ ಸಿಡಿಪಿಒ ಇಲಾಖೆಯಿಂದ ನಡೆಯಿತು. ನ್ಯಾಯಾಲಯದ ಮೂಲಕ ಸರಕಾರದಿಂದ ಪ್ರಾಯೋಜಿತ ಮಹಾತ್ಮ ಗಾಂಧೀಜಿ ಅವರ ಕುರಿತು ಚಿತ್ರಿಕರಣವನ್ನು ಪ್ರದರ್ಶಿಸಲಾಯಿತು. ನ್ಯಾಯವಾದಿ ಎಮ್.ಪಿ.ಅಬೂಬಕ್ಕರ್, ಸಹಾಯಕಿ ಶಿಶುಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ, ಬಪ್ಪಳಿಗೆ ಅಂಗನವಾಡಿಯ ಬಾಲವಿಕಾಸ ಸಮಿತಿ ಅಧ್ಯಕ್ಷೆ ಜಯಂತಿ ದಯಾನಂದ, ನಗರಸಭೆ ಮಾಜಿ ಸದಸ್ಯೆ ಸ್ವರ್ಣಲತಾ ಹೆಗ್ಡೆ, ಸೂರ್ಯಪ್ರಭಾ ಕಟ್ಟಡದ ಮಾಲಕಿ ದೀಪಾ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಝೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ ಸ್ವಾಗತಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button