ಮನುಷ್ಯರಾಗಿ ಬದುಕುವುದೇ ಗಾಂಧಿಮಾರ್ಗ ಅಂತಿಮ ಪರಿಹಾರ-ದಿನೇಶ್ ಅಮೀನ್ ಮಟ್ಟು….
ಪುತ್ತೂರು; ದೇಶದ ಜನತೆಯ ಉದ್ಧಾರಕ್ಕೆ ಯಾವುದೇ ಅವತಾರ ಪುರುಷನ ನಿರೀಕ್ಷೆ ಬೇಕಾಗಿಲ್ಲ. ಗಾಂಧೀ ಮಾರ್ಗದಲ್ಲಿ ನಡೆದು ನಾವೂ ಸಣ್ಣ ಸಣ್ಣ ಗಾಂಧಿಗಳಾಗಿ ಬದುಕುವ ಜತೆಗೆ ನಾವು ಜೀವಂತವಾಗಿ ಹಾಗೂ ಮನುಷ್ಯರಾಗಿ ಬದುಕುವುದಕ್ಕೆ ಗಾಂಧೀ ಮಾರ್ಗವೇ ಅಂತಿಮ ಪರಿಹಾರ ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯ ಪಟ್ಟರು.
ಪುತ್ತೂರು ದರ್ಬೆಯ ಮಕ್ಕಳ ಮಂಟಪದಲ್ಲಿ ಬುಧವಾರ ನಡೆದ ಗಾಂಧಿ ಜಯಂತಿ ಹಾಗೂ ಶಿಕ್ಷಣ ತಜ್ಞ ಎನ್.ಸುಕುಮಾರ ಗೌಡ ಅವರ ನೇತೃತ್ವದಲ್ಲಿ ನೂತನವಾಗಿ ಆರಂಭಿಸಲಾದ ತತ್ವಾಧಾರಿತ ಪ್ರಜಾಪಥ ಚಳುವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ನಮಗೆ ಗಾಂಧೀಜಿ ಅವರ ಕೆಲವು ಘೋಷಣೆಗಳು ಗೊತ್ತಿವೆ. ಆದರೆ ಗಾಂಧಿ ಗೊತ್ತಿಲ್ಲ. ನಾರಾಯಣಗುರು ಅವರ ಕೆಲವು ವಿಚಾರಗಳು ಗೊತ್ತಿವೆ. ಆದರೆ ನಾರಾಯಣಗುರು ಗೊತ್ತಿಲ್ಲ. ಗಾಂಧೀ ಯಾವುತ್ತೂ ಸೈದ್ಧಾಂತಿಕ ವಿರೋಧ ವ್ಯಕ್ತ ಪಡಿಸಿದ್ದರೂ ವ್ಯಕ್ತಿ ದ್ವೇಷ ಹೊಂದಿರಲಿಲ್ಲ. ಆದರೆ ಇಂದು ಸಿದ್ಧಾಂತದ ವಿರೋಧಕ್ಕಿಂತಲೂ ವ್ಯಕ್ತಿ ದ್ವೇಷ ಹೆಚ್ಚಾಗುತ್ತಿದೆ. ಇದು ಸಮಾಜಕ್ಕೆ ಹೆಚ್ಚು ಆಪಾಯಕಾರಿ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣತಜ್ಞ ಡಾ.ಎನ್.ಸುಕುಮಾರ ಗೌಡ ಅವರು ಸಂವಿಧಾನವೇ ನಮ್ಮ ಗುರಿಯಾಗಿರುವ ಪ್ರಜಾಪಥ ಚಳುವಳಿ ಇಂದಿನ ಅನಿವಾರ್ಯತೆಯಾಗಿದ್ದು, ಇದೊಂದು ತತ್ವಾಧಾರಿತ ರೀತಿಯಲ್ಲಿ ನಡೆಯಲಿದೆ. ಯಾವುದೇ ರಾಜಕೀಯ ಪಕ್ಷದ ಜತೆ ಸೇರ್ಪಡೆಯಾಗದೆ ಜನಜಾಗೃತಿ ಉಂಟು ಮಾಡುವುದೇ ಈ ಚಿಂತನೆಯ ಉದ್ದೇಶವಾಗಿದೆ ಎಂದರು. ನಂತರ ಪ್ರಜಾಪಥ ವಿಚಾರದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.