ಭಗವದ್ಗೀತೆಯಿಂದ ಬೌದ್ಧಿಕ ಸ್ತರ ವಿಸ್ತಾರ- ಡಾ. ಹೆಗ್ಗಡೆ…
ಧರ್ಮಸ್ಥಳ: “ಶ್ರೀಮದ್ಭಗವದ್ಗೀತೆಯನ್ನು ಅರ್ಥಮಾಡಿಕೊಂಡು ಬರೆಯುವುದರಿಂದ ಬೌದ್ಧಿಕ ಸ್ತರ ವಿಸ್ತಾರವಾಗುತ್ತದೆ. ಭಗವದ್ಗೀತೆಯ ಅಧ್ಯಯನ ಪುಣ್ಯಪ್ರದವೂ, ಜ್ಞಾನ ಮಾರ್ಗವೂ, ಕರ್ತವ್ಯವೂ ಆಗಿರುವುದರಿಂದ ಪ್ರತಿಯೊಬ್ಬರೂ ಕೋಟಿಗೀತಾಲೇಖನ ಯಜ್ಞದ ಮೂಲಕ ಭಗವದ್ಗೀತೆಯನ್ನು ಬರೆಯುವುದರಲ್ಲಿ ತೊಡಗಿಸಿಕೊಳ್ಳಬಹುದಗಿದೆ” ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪ್ರಧಾನ ಯೋಜನೆಯಾಗಿರುವ ಜಾಗತಿಕ ಧಾರ್ಮಿಕ ಬೃಹತ್ ಸಂಕಲ್ಪ ಸರ್ವರಿಗೂ ಈ ವಿಶೇಷ ಅವಕಾಶವನ್ನು ಕಲ್ಪಿಕೊಟ್ಟಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಶ್ರೀ ಪ್ರತಾಪ್ ಸಿಂಹ ನಾಯಕ್, ಮಡಿಕೇರಿ,ಶಿವಮೊಗ್ಗ,ಅಮ್ಮತ್ತಿ ಮತ್ತು ಕುಶಾಲನಗರಗಳ ಯಜ್ಞದೀಕ್ಷಾಬದ್ಧರಿಗೆ ಭಗವದ್ಗೀತೆ ಬರೆಯುವ ಹೊತ್ತಗೆಗಳನ್ನು ವಿತರಿಸಿ, ಧರ್ಮಸ್ಥಳದಲ್ಲಿ ಕೋಟಿಗೀತಾಲೇಖನ ಯಜ್ಞ ನೋಂದಣಿ ಅಭಿಯಾನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶ್ರೀಕ್ಷೇತ್ರದ ಪ್ರತಿಷ್ಠಿತ ವಸಂತಮಹಲ್‍ನಲ್ಲಿ ಮುಂದಿನ ದಿನಗಳಲ್ಲಿ ನಿಗದಿತ ದಿನ ಮತ್ತು ಅವಧಿಗಳಲ್ಲಿ ಕಾರ್ಯಾಚರಿಸಲಿದೆ ಎಂದು ಪ್ರಕಟಿಸಿದರು.
ಪ್ರತಾಪಸಿಂಹ ನಾಯಕ್ ಶುಭ ಹಾರೈಸಿದರು. ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಚಾರಕರಾದ ರಮಣಾಚಾರ್ಯ, ರಮೇಶ್ ಭಟ್, ಅಂತರ್ಯಾಮಿಯ ನಂದನ್ ದಳವಾಯಿ, ಪ್ರಮೋದ್ ಸಾಗರ್, ಶ್ರೀಶ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು. ಧರ್ಮಸ್ಥಳದಲ್ಲಿ ಭಗವದ್ಗೀತೆಯ ಸೇವೆ ಸಲ್ಲಿಸಲು ಅಪೇಕ್ಷಿಸುವವರು, ಹೆಚ್ಚಿನ ಮಾಹಿತಿಗಾಗಿ 8792158946 ನ್ನು ಸಂಪರ್ಕಿಸಬಹುದೆಂದು ಕೋಟಿಗೀತಾಲೇಖನ ಯಜ್ಞ ಸಮಿತಿಯು ತಿಳಿಸಿದೆ.