ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಪದವಿ ಪ್ರದಾನ ಸಮಾರಂಭ…
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2023-24ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ “ಸಮಾವರ್ತನ ಸಮಾರಂಭ” ಆ.24 ರಂದು ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿ ಕನಿಷ್ಕ.ಎಸ್.ಚಂದ್ರ ಮಾತನಾಡಿ, ಜೀವನದಲ್ಲಿ ನಾವು ಇಷ್ಟಪಡುವಂತಹ ಕೆಲಸಗಳೇ ನಮ್ಮ ಪಾಲಿಗೆ ಸಿಗುತ್ತದೆ ಎನ್ನುವಂತಿಲ್ಲ. ಆದರೂ ನಾವು ಮಾಡುವ ಕೆಲಸವನ್ನು ಪ್ರಮಾಣಿಕವಾಗಿ ಪ್ರೀತಿಸಿ ಅದರ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ನಿಮ್ಮ ಇದುವರೆಗಿನ ಓದು ಸೀಮಿತ ಅವಧಿಯ ನಿರ್ಧಿಷ್ಟ ವಿಷಯದ ಮೇಲಿನ ಪ್ರಶ್ನೆಗಳನ್ನು ಉತ್ತರಿಸುವುದು ಆಗಿತ್ತು. ಆದರೆ ಜೀವನದಲ್ಲಿ ಹಾಗಲ್ಲ ಹೆಜ್ಜೆ ಹೆಜ್ಜೆಗೂ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುತ್ತಾ ಮುಂದುವರಿಯಬೇಕು. ಅದಕ್ಕಾಗಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಾತಿಯನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಉತ್ತಮ ಸ್ಥಾನವನ್ನು ಗಳಿಸಿಕೊಂಡು ದೇಶದ ಉನ್ನತಿಯ ನೀತಿ ರಚನೆಯ ಹರಿಕಾರರಾಗಬೇಕು ಎಂದು ಅವರು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ನೀವು ಗಳಿಸಿರುವ ಪದವಿ ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ. ಈ ಪದವಿ ಅವಕಾಶಗಳ ಬಾಗಿಲನ್ನು ತೆರೆಯುವ ಕೀಲಿಕೈ ಮಾತ್ರ. ದೊರೆತ ಅವಕಾಶಗಳನ್ನು ಉಳಿಸಿ ಜೀವನದಲ್ಲಿ ಹೆಚ್ಚಿನದ್ದನ್ನು ಸಾಧಿಸುವ ಗುರಿ ನಿಮ್ಮದಾಗಬೇಕು. ತಾವು ಬೆಳೆಯುವುದರ ಜತೆಯನ್ನು ಸಮಾಜವನ್ನು ಬೆಳೆಸುವ ಕೆಲಸವೂ ಆಗಬೇಕು ಅದಕ್ಕಾಗಿ ಈ ಮಣ್ಣಿನ, ನೆಲ, ಜಲದ ಬಗ್ಗೆ ಪ್ರೀತಿ ಗೌರವವಿರುವ ಪ್ರಜ್ಞಾವಂತ ಪ್ರಜೆಗಳಾಗಿ ಎಂದು ಹಾರೈಸಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 3ನೇ ರ‍್ಯಾಂಕ್ ಗಳಿಸಿರುವ ಕೇಶವ ಪ್ರಜ್ವಲ್.ಪಿ ಹಾಗೂ 5ನೇ ರ‍್ಯಾಂಕ್ ಗಳಿಸಿರುವ ಕೆ.ಪಲ್ಲವಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಪ್ರತಿ ವಿಭಾಗದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕ ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ದಾಖಲಾತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥರು, ವಿಭಾಗ ಮುಖ್ಯಸ್ಥರುಗಳು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಸ್ವಾಗತಿಸಿದರು. ಪ್ರೊ.ರೂಪಾ.ಜಿ.ಕೆ ಪ್ರಮಾಣವಚನ ಬೋಧಿಸಿದರು. ಡಾ.ದೀಪಕ್.ಕೆ.ಬಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಪ್ರಶಾಂತ ವಂದನಾರ್ಪಣೆಗೈದರು. ಪ್ರೊ.ನಿಶಾ.ಜಿ.ಆರ್ ಹಾಗೂ ಪ್ರೊ.ನೀಮಾ ಕಾರ್ಯಕ್ರಮ ನಿರ್ವಹಿಸಿದರು.