ಜಗತ್ತಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೊಸ ಮನ್ವಂತರ ಹುಟ್ಟು ಹಾಕಿದ ವಿಶ್ವದ ಮಹಾನ್ ಚೇತನ ಗಾಂಧಿ -ಎ.ಸಿ. ಕೃಷ್ಣಮೂರ್ತಿ….
ಪುತ್ತೂರು:ಅಹಿಂಸಾ ಹೋರಾಟದ ಪರಿಣಾಮಕಾರಿ ಅಸ್ತ್ರದ ಮೂಲಕ ಜನತೆಯ ಮನಸ್ಸಿನ ನಾಶ ಮಾಡುವ ಗಾಂಧಿ ಜಗತ್ತಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೊಸ ಮನ್ವಂತರ ಹುಟ್ಟು ಹಾಕಿದ ವಿಶ್ವದ ಮಹಾನ್ ಚೇತನ ಎಂದು ಪುತ್ತೂರು ಉಪವಿಭಾಗಾಧಿಕಾರಿ ಎಚ್,ಕೆ.ಕೃಷ್ಣಮೂರ್ತಿ ಹೇಳಿದರು.
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಬುಧವಾರ 150ನೇ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಸ್ಪರ್ಶತೆ ವಿರುದ್ಧ ಹೊಸಯುಗಕ್ಕೆ ನಾಂದಿ ಹಾಡಿದ ಗಾಂಧಿ ಅವರ ಆರ್ಥಿಕನೀತಿಯನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ. ಗಾಂಧಿ ಆರ್ಥಿಕತೆಯಲ್ಲಿ ಮಾನಸಿಕ ಶಾಂತಿ ಇದೆ. ಭಾರತದ ಆರ್ಥಿಕತೆ ಕುಸಿಯದಂತೆ ಕಾಪಾಡುವ ಶಕ್ತಿ ಇದೆ. ಗಾಂಧಿ ಆರ್ಥಿಕ ನೀತಿ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಯಾರೂ ಏನೇ ಟೀಕೆ ಮಾಡಿದರೂ ಗಾಂಧಿ ಅವರ `ಗಾಂಧೀತನ’ಕ್ಕೆ ಯಾವುದೇ ಧಕ್ಕೆ ಇಲ್ಲ. ಆರ್ಥಿಕ, ಸಾಮಾಜಿಕ, ಸೈದ್ಧಾಂತಿಕ ಮನಸ್ಥಿತಿಯಲ್ಲಿ ಅವರು ಕಂಡುಕೊಂಡ ಸತ್ಯಾಗ್ರಹದ ಅಸ್ತ್ರ ಸತ್ಯದ ಹಾಗೂ ಧರ್ಮದ ಸೌಹಾರ್ಧತೆಯನ್ನು ಬೆಳೆಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವೆಲ್ಲಾ ಗಾಂಧಿಯಾಗಬೇಕಾಗಿಲ್ಲ. ಆದರೆ ಅವರ ಚಿಂತನೆ ಆದರ್ಶಗಳ ಪ್ರೇರಣೆ ಮೂಲಕ ಸಕಾರಾತ್ಮಕ ಯೋಜನೆ ಹುಟ್ಟುಹಾಕಬೇಕಾಗಿದೆ ಎಂದರು.
ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ, ಗಾಂಧಿ ಸತ್ಯದ ಪ್ರತಿಪಾದಕ ಎನ್ನುವುದಕ್ಕಿಂತಲೂ ಸತ್ಯದ ಅನ್ವೇಷಕರಾಗಿದ್ದರು. ಜಗತ್ತಿನ ಪ್ರೇರಕ ಶಕ್ತಿಯಾಗಿರುವ ಗಾಂಧಿ ಚಿಂತನೆಗಳು ನಮಗೆ ಆದರ್ಶವಾಗಬೇಕು. ಅವರ ಸತ್ಯನಿಷ್ಠೆ, ಸರಳತೆ, ಪ್ರಾಮಾಣಿಕತೆಯೇ ಅವರನ್ನು ಮಹಾತ್ಮರಾಗಿ ರೂಪಿಸಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಅನಂತಶಂಕರ ವಹಿಸಿದ್ದರು. ವೇದಿಕೆಯಲ್ಲಿ ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಇದ್ದರು. ಕಚೇರಿ ಸಿಬಂದಿ ದಯಾನಂದ ಡಿ.ಟಿ. ಕಾರ್ಯಕ್ರಮ ನಿರೂಪಿಸಿದರು.