ಗೀತಾ ಮಂದಿರದಲ್ಲಿ ಮಾಸಿಕ ಸ್ವಚ್ಛತಾ ಅಭಿಯಾನ – ತುಳಸೀ ವನ ನಿರ್ಮಾಣಕ್ಕೆ ಚಾಲನೆ…

ಉಡುಪಿ: ಶ್ರೀ ಕೃಷ್ಣ ಮಠಕ್ಕೆ ಅನತಿ ದೂರದಲ್ಲಿರುವ ಗೀತಾ ಮಂದಿರದಲ್ಲಿ ರಾಮನವಮಿಯ ಪರ್ವ ದಿನವಾದ ಎಪ್ರಿಲ್ 5 ರಂದು ಮಾಸಿಕ ಸ್ವಚ್ಛತಾ ಅಭಿಯಾನ ನಡೆಯಿತು.
ಬೆಳಗ್ಗೆ 6 ರಿಂದ 7 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವ ಗೀತಾ ಪರ್ಯಾಯ ಪೀಠದ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬೃಹತ್ ಗಾತ್ರದ – ವಿಶಿಷ್ಟವಾದ ಅಷ್ಟಲಕ್ಷ್ಮಿ ನವಾಂಶ ಸಹಿತ ತುಳಸೀ ಕಟ್ಟೆಯಲ್ಲಿ ತುಳಸೀ ಗಿಡ ನೆಡುವ ಮೂಲಕ ಗೀತಾ ಮಂದಿರದ ಸುತ್ತಲಿನ ತುಳಸಿವನ ನಿರ್ಮಾಣಕ್ಕೆ ಚಾಲನೆ ನೀಡಿದರು.
ಒಂದು ದಳ ತುಳಸಿಯ ತೂಕಕ್ಕೆ ತನ್ನ ಪೂರ್ಣ ತೂಕವನ್ನು ಸಮ ಮಾಡಿಕೊಂಡ ಶ್ರೀಕೃಷ್ಣ ಪರಮಾತ್ಮ ಸೇವೆಯೆನ್ನುವ ತುಳಸಿದಳ ಸಮರ್ಪಣೆ ಮಾಡುವವರ ಭವಭಾರ ಕಳೆಯಲು ಕಾರಣನಾಗುತ್ತಾನೆ ಎಂದ ಶ್ರೀಪಾದರು ಈ ತುಳಸೀ ಗಿಡ ಮರವಾಗಿ ಬೆಳೆದು ಪ್ರೇಕ್ಷಣೇಯವಾಗಲಿ ಎಂದು ಹರಸಿದರು. ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡು ಸರ್ವರನ್ನು ಆಶೀರ್ವದಿಸಿದರು.
ಕೃಷ್ಣಗೀತಾ ಸೇವಾ ವೃಂದ ಸಂಯೋಜಿಸಿದ ಈ 6 ನೇ ಮಾಸಿಕ ಸ್ವಚ್ಛತಾ ಅಭಿಯಾನದಲ್ಲಿ ಉಡುಪಿಯ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ರಾಘವೇಂದ್ರ ಭಟ್, ಪದಾಧಿಕಾರಿಗಳು ಮತ್ತು ಸದಸ್ಯರ ಸಹಿತ 20 ಕ್ಕೂ ಹೆಚ್ಚು ಸೇವಾಸಕ್ತರು ಪಾಲ್ಗೊಂಡಿದ್ದರು. ಶ್ರೀಮಠದ ಪರವಾಗಿ ದಿವಾನರಾದ ನಾಗರಾಜ ಆಚಾರ್ಯ, ಕೋಟಿಗೀತಾ ಲೇಖನಯಜ್ಞ ಪ್ರಚಾರಕರಾದ ವಿದ್ವಾನ್ ಕೆ.ವಿ. ರಮಣಾಚಾರ್ಯ ಭಾಗವಹಿಸಿದ್ದರು.
ಪರ್ಯಾಯ ಶ್ರೀಪಾದರ ಮಾರ್ಗದರ್ಶನದಂತೆ ಕೃಷ್ಣ ಗೀತಾ ಸೇವಾವೃಂದವು ಪ್ರತೀ ತಿಂಗಳ ಮೊದಲ ಭಾನುವಾರ ಈ ಸ್ವಚ್ಛತಾ ಅಭಿಯಾನವನ್ನು ಪತಂಜಲಿ ಯೋಗ ಸಮಿತಿಯೊಂದಿಗೆ ಸೇರಿ ನಡೆಸಿಕೊಂಡು ಬರುತ್ತಿದೆ. ಸೇವಾಸಕ್ತರು 8792158946 ದಲ್ಲಿ ನೋಂದಾಯಿಸಿಕೊಂಡು ಶ್ರೀ ಕೃಷ್ಣ ಸೇವಾಕಾರ್ಯಗಳಲ್ಲಿ ಭಾಗವಹಿಸಬಹುದು.