ಮಣ್ಣು ಮತ್ತು ಜೈವಿಕ ಸಂಪತ್ತು ಸಂರಕ್ಷಣೆ ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಕಾರ್ಯಗಾರ….
ಬಂಟ್ವಾಳ: ಸುಡು ಮಣ್ಣು ಸಾವಯವ ಗೊಬ್ಬರವಲ್ಲ ಕೃಷಿ ತ್ಯಾಜ್ಯಗಳನ್ನು ಸುಡುವುದು ತಪ್ಪು, ಭೂಮಿಯ ಮೇಲಿನ ಮಣ್ಣು ಕೃಷಿಗೆ ಯೋಗ್ಯವಾದದ್ದು ಅದರಲ್ಲಿ ಕೃಷಿಗೆ ಪೂರಕವಾದ ಸಾವಿರಾರು ಸೂಕ್ಷ್ಮಜೀವಿಗಳಿವೆ, ಅವುಗಳನ್ನು ರಾಶಿ ಹಾಕಿ ಸುಡು ಮಣ್ಣು ಆಗಿ ಪರಿವರ್ತಿಸಿದರೆ, ಸೂಕ್ಷ್ಮ ಜೀವಿಗಳು ಸತ್ತು ಹೋಗುತ್ತವೆ, ಬದಲಿಗೆ ಕೃಷಿ ತ್ಯಾಜ್ಯ ಫಲವತ್ತಾದ ಮಣ್ಣುಗಳನ್ನು ಸಂಗ್ರಹಿಸಿ ರಾಶಿ ಹಾಕಿ ಇಟ್ಟರೆ ಅದೇ ಒಂದು ವರ್ಷ ಆಗುವಾಗ ಫಲವತ್ತಾದ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತದೆ. ರೈತರು ಈ ರೀತಿ ತಮಗೆ ಬೇಕಾದ ಗೊಬ್ಬರವನ್ನು ತಾವೇ ತಯಾರಿಸಬಹುದು ಎಂದು ದಿಶಾ ಸಂಸ್ಥೆ ಕೈಕಂಬ ಇದರ ಸಂಯೋಜಕ ಹಾಗೂ ಕೃಷಿ ತಜ್ಞರಾದ ಶ್ರೀ ಹೆನ್ರಿ ವಾಲ್ಡರ್ ಹೇಳಿದರು.
ಅವರು ದಿಶಾ ಟ್ರಸ್ಟ್ (ರಿ) ಕೈಕಂಬ, ಕಲ್ಪವೃಕ್ಷ ಕೃಷಿಕರ ಅಭಿವೃದ್ದಿ ಸಂಘ ಅಮ್ಮುಂಜೆ ಇವರ ಜಂಟಿ ಆಶ್ರಯದಲ್ಲಿ ನೈಸರ್ಗಿಕ ಸಂಪತ್ತುಗಳ ಸಂರಕ್ಷಣೆ ಅಭಿಯಾನದ ಅಂಗವಾಗಿ ಅಮ್ಮುಂಜೆ ಕಲಾಯಿ ಮಾಧವ ಶೆಟ್ಟಿಯವರ ಮನೆ ವಠಾರದಲ್ಲಿ ನಡೆದ ಮಣ್ಣು ಮತ್ತು ಜೈವಿಕ ಸಂಪತ್ತು ಸಂರಕ್ಷಣೆ ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಅಮ್ಮುಂಜೆ ಅನುಭವಿ ಕೃಷಿಕರಾದ ಚಂದ್ರಶೇಖರ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ ಮಾಹಿತಿ ನಮಗೆ ಶಕ್ತಿ” ನಮ್ಮ ಕೃಷಿಕರು ಕೃಷಿಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಪವೃಕ್ಷ ಕೃಷಿಕರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಸ್ಟ್ಯಾನಿ ಮಿನೇಜಸ್ ವಹಿಸಿದ್ದರು.ದಿಶಾ ಸಂಸ್ಥೆಯ ಕಾರ್ಯಕರ್ತರಾದ ಹರಿಣಾಕ್ಷಿ ಸಂಘದ ಕಾರ್ಯದರ್ಶಿ ಗೀತಾ ಉಪಾಧ್ಯಕ್ಷರಾದ ದೀಪಕ್, ಕೋಶಾಧಿಕಾರಿ ಅಚಿಜಲಿನ್ ಪಿಂಟೋ ಉಪಸ್ಥಿತರಿದ್ದರು. ಗೀತಾ ಕಾರ್ಯಕ್ರಮ ನಿರೂಪಿಸಿ ಅಂಜಲಿನ್ ಪಿಂಟೋ ಸ್ವಾಗತಿಸಿ, ವತ್ಸಲ ವಂದಿಸಿದರು.