ಪಂಪ್‌ವೆಲ್ ಫ್ಲೈ ಓವರ್ ವಿಚಾರ – ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ನಳಿನ್…
ಮಂಗಳೂರು : ಪಂಪ್‌ವೆಲ್ ಮೇಲ್ಸೇತುವೆ ಗಡುವು ಕೊನೆಗೊಂಡ ಹಿನ್ನಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನವಯುಗ ಕಂಪೆನಿಗೆ ಎಚ್ಚರಿಕೆ ನೀಡಿದ್ದಾರೆ.
ನವಯುಗ ಕಂಪೆನಿಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಕಂಪೆನಿಯು ಜನವರಿ 31 ಕ್ಕೆ ಮೇಲ್ಸೇತುವೆ ಉದ್ಘಾಟನೆ ಆಗಲಿದೆ ಎಂದು ಮತ್ತೊಂದು ಗಡುವು ನೀಡಿದ್ದಾರೆ.
ಈ ಕಾಮಗಾರಿ ಮುಕ್ತಾಯ ಮಾಡುವುದಾಗಿ ಐದು ಬಾರಿ ತಿಳಿಸಿದ್ದೀರಿ, ಯಾವಾಗ ಕಾಮಗಾರಿ ಅಂತ್ಯ ಮಾಡುತ್ತೀರಿ, ಈ ಕುರಿತು ಲಿಖಿತ ರೂಪದಲ್ಲಿ ತಿಳಿಸಬೇಕು. ಕಾಮಗಾರಿ ಮುಕ್ತಾಯವಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿಯ ಹಿನ್ನಲೆಯಲ್ಲಿ ಈ ಒಂದು ವರ್ಷದಲ್ಲೇ 500 ಸಭೆಗಳನ್ನು ಸೇರಲಾಗಿದೆ. ಕಾಮಗಾರಿ ಮುಗಿಸದಿದ್ದಲ್ಲಿ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿದ್ದೀರಿ, ಆದರೆ ಇನ್ನೂ ಕಾಮಗಾರಿ ಆಗಿಲ್ಲ. ಈಗಾಗಲೇ ಕಂಪೆನಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಪೊಲೀಸರು ಈ ಅಧಿಕಾರಿಗಳನ್ನು ಬಂಧನ ಮಾಡಲಿ. ಸಂಸದನಾಗಿ ಎಲ್ಲಾ ನೆರವನ್ನು ನೀಡಿದ್ದೇನೆ, ಆದರೂ ಕಾಮಗಾರಿ ಪೂರ್ಣವಾಗಿಲ್ಲ. ಈ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗುವವರೆಗೂ ಟೋಲ್ ಗೇಟ್ ಮುಚ್ಚಬೇಕು. ಮುಚ್ಚದಿದ್ದಲ್ಲಿ ನಾನೇ ಮುಷ್ಕರ ಮಾಡುತ್ತೇನೆ ಎಂದು ಸಂಸದರು ಎಚ್ಚರಿಕೆ ನೀಡಿದ್ದಾರೆ.