ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ – ಪರವಾನಿಗೆ ರಹಿತ ವ್ಯಾಪಾರಿಗಳ ಅಂಗಡಿ ಮುಟ್ಟುಗೋಳು ಹಾಕಲು ಅಧ್ಯಕ್ಷರ ಸೂಚನೆ….

ಪುತ್ತೂರು:ಕೃಷಿ ಉತ್ಪನ್ನಗಳ ವ್ಯಾಪಾರಕ್ಕೆ ಎಪಿಎಂಸಿಯಿಂದ ಪರವಾನಿಗೆ ಪಡೆಯದೇ ಹಾಗೂ ಪರವಾನಿಗೆ ನವೀಕರಿಸದೇ ಕದ್ದು ಮುಚ್ಚಿ ವ್ಯಾಪಾರ ಮಾಡುವ ವರ್ತಕರ ಅಂಗಡಿಗಳನ್ನು ಕಾನೂನು ರೀತಿಯಲ್ಲಿ ಮುಟ್ಟುಗೋಳು ಹಾಕಿಕೊಳ್ಳುವಂತೆ ಎಪಿಎಂಸಿ ಅಧ್ಯಕ್ಷರು ಡಿ. 30 ರಂದು ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಎಪಿಎಂಸಿ ಸಾಮಾನ್ಯ ಸಭೆಯು ಅಧ್ಯಕ್ಷರಾದ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷರು ಎಪಿಎಂಸಿ ಪ್ರಾಂಗಣದೊಳಗೆ ನಡೆಯುವ ವ್ಯವಹಾರಕ್ಕಿಂತ ಅಧಿಕವಾಗಿ ಗ್ರಾಮಾಂತರ ಪ್ರದೇಶದಲ್ಲಿ ವ್ಯವಹಾರ ನಡೆಯುತ್ತಿದೆ. ವರ್ತಕರು ಮನೆ ಮನೆಗಳಿಗೆ ಹೋಗಿ ಖರೀದಿಸುತ್ತಿದ್ದಾರೆ. ಗ್ರಾಮಾಂತರದಲ್ಲಿ ಪರವಾನಿಗೆ ಪಡೆಯದೇ ವ್ಯಾಪಾರ ಮಾಡುತ್ತಿರುವುದರಿಂದ ನಮಗೆ ವ್ಯಾಪಾರ ಕುಂಠಿತವಾಗಿದೆ ಎಂದು ಪ್ರಾಂಗಣದ ವರ್ತಕರಿಂದ ದೂರುಗಳು ಬಂದಿದೆ. ಪರವಾನಿಗೆ ಪಡೆಯದೇ ವ್ಯವಹಾರ ಮಾಡುವ ವರ್ತಕರ ಅಂಗಡಿಗಳನ್ನು ಮುಟ್ಟುಗೋಳು ಹಾಕಿಕೊಳ್ಳಲು ಅವಕಾಶವಿದ್ದು ಇಂತಹ ಪ್ರಕರಣ ಕಂಡು ಬಂದಲ್ಲಿ ವರ್ತಕರ ಅಂಗಡಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪರವಾನಿಗೆ ಇಲ್ಲದೆ ವ್ಯವಹರಿಸಲು ಯಾರಿಗೂ ಅವಕಾಶ ಕೊಡಬಾರದು. ಅಧಿಕಾರಿಗಳು ಯಾರ ಒತ್ತಡಗಳಿಗೂ ಬಲಿಯಾಗದೆ ಕದ್ದು ಮುಚ್ಚಿ ವ್ಯವಹಾರ ನಡೆಸುವವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಬೇಕು. ಪರವಾನಿಗೆ ನವೀಕರಿಸದಿರುವ ಹಾಗೂ ಪಡೆಯದಿರುವ ವರ್ತಕರಿಗೆ ನೋಟೀಸ್ ನೀಡಿ ಮಾಡಿಸಿಕೊಳ್ಳಲು 10 ದಿನಗಳ ಕಾಲಾವಕಾಶ ನೀಡಬೇಕು. ಆ ಬಳಿಕ ಯಾವುದೇ ಪ್ರಕರಣ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ನಗರ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳನ್ನು ರೈತರು ಬೆಳೆಸುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿಯೇ ಕೃಷಿ ಉತ್ಪನ್ನಗಳನ್ನು ಬೆಳೆಯಲಾಗುತ್ತಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಉಪ ಮಾರುಕಟ್ಟೆಗಳನ್ನು ಸ್ಥಾಪಿಸಿ, ಆಯಾ ಉಪಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ವರ್ತಕರಿಗೆ ಲೈಸನ್ಸ್ ನೀಡಿದರೆ ನಗರದ ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿರುವ ನೂರಾರು ವರ್ತಕರ ಪಾಡೇನು? ನಾವು ಎಲ್ಲಿಗೆ ಹೋಗಬೇಕು. ಉಪಮಾರುಕಟ್ಟೆ ವ್ಯಾಪ್ತಿಯಲ್ಲಿ ಯಾವ ಮಾನದಂಡದಲ್ಲಿ ಲೈಸನ್ಸ್ ನೀಡಲಾಗುವುದು ಎಂದು ವರ್ತಕ ಪ್ರತಿನಿಧಿ ವಿ.ಎಚ್ ಅಬ್ದುಲ್ ಶಕೂರ್ ಪ್ರಶ್ನಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ವರ್ತಕರು ಮನೆ ಮನೆಗೆ ತೆರಳಿ ವ್ಯವಹಾರ ನಡೆಸುತ್ತಿವುದೂ ಗಮನಕ್ಕೆ ಬಂದಿದೆ. ಅಡ್ಡದಾರಿಯಲ್ಲಿ ವ್ಯವಹಾರ ನಡೆಸಲು ಅವಕಾಶ ಕೊಡುವುದಿಲ್ಲ. ಲೈಸನ್ಸ್ ಇಲ್ಲದೆ ವ್ಯವಹಾರ ನಡೆಸುವ ವರ್ತಕರ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಇದರಲ್ಲಿ ಸದಸ್ಯರ ಹಸ್ತಕ್ಷೇಪ ಮಾಡಬಾರದು. ಗ್ರಾಮಾಂತರ ಪ್ರದೇಶದಲ್ಲಿ ಅಡ್ಡದಾರಿಯಲ್ಲಿ ವ್ಯವಹಾರ ನಡೆಸುವ ವರ್ತಕರ ಮಾಹಿತಿಯನ್ನು ಸದಸ್ಯರು ನೀಡುವಂತೆ ಅಧ್ಯಕ್ಷರು ತಿಳಿಸಿದರು.
ರೈತರು ಅಧಿಕವಾಗಿರುವ ಸವಣೂರು, ಆಲಂಕಾರು ಹಾಗೂ ಕುಂಬ್ರಗಳಲ್ಲಿ ಉಪಮಾರುಕಟ್ಟೆ ಸ್ಥಾಪನೆಗೆ ಅನುಮತಿ ನೀಡುವಂತೆ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಸವಣೂರಿನಲ್ಲಿ ನಿವೇಶನ ಸಿದ್ದವಾಗಿದೆ. ಆಲಂಕಾರಿನಲ್ಲಿ ಸಂತೆ ಮಾರುಕಟ್ಟೆಯಿದೆ ಎಂದು ಅಧ್ಯಕ್ಷರು ತಿಳಿಸಿದರು. ಕೊಳ್ತಿಗೆ ಭಾಗದಲ್ಲಿಯೂ ಅಧಿಕ ಅಡಿಕೆ ಬೆಳೆಗಾರರಿದ್ದು ಪೆರ್ಲಂಪಾಡಿಯಲ್ಲಿಯೂ ಉಪಮಾರುಕಟ್ಟೆ ಸ್ಥಾಪಿಸುವಂತೆ ಸದಸ್ಯ ತೀರ್ಥಾನಂದ ದುಗ್ಗಳ ಆಗ್ರಹಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಮಂಜುನಾಥ ಎನ್.ಎಸ್, ಸದಸ್ಯರಾದ ತ್ರೀವೇಣಿ ಪೆರ್ವೋಡಿ, ಕುಶಾಲಪ್ಪ ಗೌಡ, ಮೇದಪ್ಪ ಗೌಡ, ಕೊರಗಪ್ಪ, ಬೂಡಿಯಾರ್ ರಾಧಾಕೃಷ್ಣ ರೈ, ಬಾಲಕೃಷ್ಣ ಬಾಣಜಾಲು, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಹಾಗೂ ಕೃಷ್ಣಕುಮಾರ್ ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ಕಲಾಪ ನಿರ್ವಹಿಸಿ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button