ಬಂಟ್ವಾಳ ತಾಲೂಕಿನಾದ್ಯಂತ ನಿರಂತರ ಮಳೆ-ಅಪಾರ ಹಾನಿ…
ಬಂಟ್ವಾಳ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆಗಳಲ್ಲಿ ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ.
ಕೆಲವು ಕಡೆ ರಸ್ತೆಗೆ ಮರಗಳು ಬಿದ್ದು ಸಂಚಾರ ಅಡ್ಡಿ ಉಂಟಾಗಿತ್ತು. ಮನೆಗಳ ಮೇಲೂ ಮರಗಳು ಬಿದ್ದು ಹಾನಿ ಉಂಟಾಗಿದೆ. ತಡೆಗೋಡೆಗಳು ಉರುಳಿ ಬಿದ್ದು ನಷ್ಟ ಸಂಭವಿಸಿದೆ.
ಗೋಳ್ತಮಜಲು ಗ್ರಾಮದ ನೆಟ್ಲ ಧನಂಜಯ ಗಟ್ಟಿ ಅವರ ವಾಸ್ತವ್ಯದ ಮನೆ ಮೇಲೆ ಅಶ್ವತ್ಥ ಮರಬಿದ್ದು ಮನೆ ಹಾಗೂ ಆವರಣ ಗೋಡೆಗೆ ಭಾಗಶಃ ಹಾನಿ ಸಂಭವಿಸಿದೆ. ನರಿಕೊಂಬು ಗ್ರಾಮದ ಮರ್ಲಿಮಾರು ಎಂಬಲ್ಲಿ ಬತ್ತದ ಗದ್ದೆಯಲ್ಲಿ ಮಳೆನೀರು ನಿಂತು ನಷ್ಟವಾಗಿದೆ. ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ರಾಮಚಂದ್ರ ಅವರ ಮನೆ ಬದಿಗೆ ಮಣ್ಣು ಜರಿದು ಬಿದ್ದು ಶೌಚಾಲಯದ ಗುಂಡಿ ಮುಚ್ಚಿದೆ.
ಪುದುಗ್ರಾಮದ ಕೆಸನಮೊಗರು ಬಾಬು ಸಪಲ್ಯ ಎಂಬವರ ಮನೆಮೇಲೆ ಮರಬಿದ್ದು ಗೋಡೆ ಬಿದ್ದು ಮಾಡಿನ ಹಂಚು ಹುಡಿಯಾಗಿದೆ. ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ನಿವಾಸಿ ಬ್ರಿಜಿತ್ ಡಿಕೋಸ್ಟ ಅವರ ವಾಸ್ತವ್ಯದ ಮನೆಗೆ ತಾಗಿರುವ ಹಟ್ಟಿಗೆ ಹಾನಿಯಾಗಿರುತ್ತದೆ. ಪುಣಚ ಗ್ರಾಮದ ಮಲ್ಲಿಕಟ್ಟೆ ನಿವಾಸಿ ಭಾಸ್ಕರ ಅವರ ಮನೆಯ ಆವರಣಗೋಡೆ ಕುಸಿದು ನಷ್ಟ ಉಂಟಾಗಿದೆ.
ಕೆದಿಲ ಗ್ರಾಮದ ಗಾಂಧಿನಗರ ನಿವಾಸಿ ಪೂವಕ್ಕ ಎಂಬವರ ವಾಸ್ತವ್ಯದ ಮನೆ ಮೇಲೆ ಮರಬಿದ್ದು ಹಾನಿಯಾಗಿರುತ್ತದೆ. ನೆಟ್ಲದ ನಿಟಿಲೇಶ್ವರ ದೇವಸ್ಥಾನದ ಸಮೀಪ ಮರಬಿದ್ದು ಆವರಣಗೋಡೆ ಕುಸಿದಿದೆ. ಇನ್ನೂ ಹಲವು ಕಡೆಗಳಲ್ಲಿ ಸಣ್ಣಪುಟ್ಟ ಹಾನಿಯಾಗುತ್ತಿರವ ಸುದ್ದಿಯಾಗಿದೆ.