ಬೈಕಂಪಾಡಿಗೆ ತೆರಳಲು ವ್ಯಾಪಾರಸ್ಥರ ನಕಾರ….
ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣುಹಂಪಲು ಸಗಟು ವ್ಯಾಪಾರವನ್ನು ನಗರದ ಹೊರ ವಲಯದ ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಸಗಟು ವ್ಯಾಪಾರಸ್ಥರು ನಿರಾಕರಿಸಿದ್ದಾರೆ.
ಈ ಕುರಿತು ಶನಿವಾರ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೊಹಮದ್ ಮುಸ್ತಫಾ ತಿಳಿಸಿದ್ದಾರೆ.
ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿ ಎರಡು ದಿನ ಕಳೆದರೂ ವ್ಯಾಪಾರಸ್ಥರು ಇನ್ನೂ ಸ್ಥಳಾಂತರಗೊಂಡಿಲ್ಲ. ಶುಕ್ರವಾರ ರಾತ್ರಿ 11ರಿಂದ ನಸುಕಿನ ಜಾವ 4 ಗಂಟೆ ವರೆಗೆ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಸಗಟು ವ್ಯಾಪಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಹಾಗಾಗಿ ಸಗಟು ವ್ಯಾಪಾರಸ್ಥರು ಮಂಗಳೂರು ನಗರ ಪ್ರವೇಶಿಸುವ ಸ್ಥಳಗಳಲ್ಲಿ ಲಾರಿ ನಿಲ್ಲಿಸಿ ಅಲ್ಲಿಂದಲೇ ರಿಟೇಲ್ ವ್ಯಾಪಾರಿಗಳಿಗೆ ಮಾರಾಟ ಮಾಡಿದರು.
ಸಗಟು ವ್ಯಾಪಾರವನ್ನು ಬೈಕಂಪಾಡಿಗೆ ಸ್ಥಳಾಂತರಿಸಬಹುದೇ ಎನ್ನುವ ಕುರಿತು ಚರ್ಚಿಸಲು ಶನಿವಾರ ಸಗಟು ಮಾರಾಟಗಾರರ ಸಭೆ ನಡೆಸಿದ್ದು, ವ್ಯಾಪಾರಿಗಳು ಬೈಕಂಪಾಡಿ ನಗರದಿಂದ ಬಹಳಷ್ಟು ದೂರದಲ್ಲಿದೆ ಹಾಗೂ ಅಲ್ಲಿ ಸೂಕ್ತ ಸೌಲಭ್ಯಗಳಿಲ್ಲ ಎಂಬ ಕಾರಣ ನೀಡಿ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ.
ಲಾಕ್‌ಡೌನ್ ಮುಗಿಯುವ ತಾತ್ಕಾಲಿಕ ಅವಧಿಗೆ ಮಾತ್ರ ಈ ವ್ಯವಸ್ಥೆ ಆಗಿರುವುದರಿಂದ ಪರ್ಯಾಯವಾಗಿ ನೆಹರೂ ಮೈದಾನ, ಸರ್ವಿಸ್ ಬಸ್ ನಿಲ್ದಾಣ ಮತ್ತು ಕರಾವಳಿ ಉತ್ಸವ ಮೈದಾನದಲ್ಲಿ ಅನುಮತಿ ನೀಡ ಬಹುದು. ಅಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದು. ಇದಲ್ಲದೆ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಪ್ರತ್ಯೇಕವಾಗಿ ದಿನ ಬಿಟ್ಟು ದಿನ ಮಾರಾಟ ಮಾಡುವ ಬಗ್ಗೆಯೂ ಚಿಂತನೆ ನಡೆಸಬಹುದು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.