ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-2024 ಸಮಾರೋಪ…
ಬಂಟ್ವಾಳ: ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರ ಹಾಕಲು ಶಾಲಾ ಹಂತದಲ್ಲಿ ಮಾಡುವ ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆ ಆಗಿದೆ. ಮಕ್ಕಳು ಸ್ಪರ್ಧೆ ಎಂದು ಭಾವಿಸದೆ, ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ನಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಅವಕಾಶ ಎಂದು ಭಾವಿಸಿ ಎಂದು ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಲಿಖಿತ ಆರ್ ಶೆಟ್ಟಿ ರವರು ಹೇಳಿದ್ದಾರೆ.
ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ಕಲ್ಲಡ್ಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ನಡೆದ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-2024 ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಐತಾಳ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಗೋಳ್ತಮಜಲು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾದ ಪ್ರೇಮ ಪುರುಷೋತ್ತಮ್ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಕಲ್ಲಡ್ಕ ಶ್ರೀ ಲಕ್ಷ್ಮೀ ನಿವಾಸ್ ಹೋಟೆಲ್ ಇದರ ಮಾಲಕರಾದ ಶಿವರಾಂ ಹೊಳ್ಳ ಇವರನ್ನು ಶಾಲಾ ಪರವಾಗಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಲೀಲಾವತಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಸುರೇಶ್ ಮೊದಲದವರು ಉಪಸ್ಥಿತರಿದ್ದರು. ಕಲ್ಲಡ್ಕ ಕ್ಲಸ್ಟರ್ ನ 12 ಶಾಲೆಗಳಿಂದ 300 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬ್ಬುಬಕ್ಕರ್ ಅಶ್ರಫ್ ಸ್ವಾಗತಿಸಿ, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ ವಂದಿಸಿದರು. ಸಹ ಶಿಕ್ಷಕಿ ಸೌಮ್ಯ ಎ ಕಾರ್ಯಕ್ರಮ ನಿರೂಪಿಸಿದರು.