ಸಂಪಾಜೆ ಪೇರಡ್ಕ ಗೂನಡ್ಕ ಮಸೀದಿ-ಕಾಶ್ಮೀರ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನಾ ಸಭೆ, ಪ್ರಾರ್ಥನೆ…

ಸುಳ್ಯ : ಕಾಶ್ಮೀರದ ಪೆಹಲ್ಗಾಮಿನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪೇರಡ್ಕ ಗೂನಡ್ಕ ಮಸೀದಿಯ ವಠಾರದಲ್ಲಿ ಜುಮಾ ನಮಾಝಿನ ಬಳಿಕ ಪ್ರತಿಭಟನಾ ಸಭೆಯು ನಡೆಯಿತು.
ಜಮಾಅತ್ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಶ್ಮೀರದಲ್ಲಿ ಉಗ್ರಗಾಮಿಗಳು ನಡೆಸಿದ ಹತ್ಯಾಕಾಂಡ ಅತ್ಯಂತ ಹೇಯ ಕೃತ್ಯವಾಗಿದೆ. ಭಾರತೀಯ ಮುಸಲ್ಮಾನರಾದ ನಾವು ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರವು ಅತಿಶೀಘ್ರವಾಗಿ ಉಗ್ರಗಾಮಿಗಳನ್ನು ಮಟ್ಟ ಹಾಕಿ ತಕ್ಕ ಶಿಕ್ಷೆ ನೀಡಬೇಕು, ಅದೇ ರೀತಿ ಈ ಪ್ರಕರಣದ ಹೆಸರಿನಲ್ಲಿ ದೇಶಪ್ರೇಮಿಗಳಾದ ಭಾರತೀಯ ಮುಸಲ್ಮಾನರನ್ನು ವಿನಾಕಾರಣ ಅಪರಾಧಿಗಳಾಗಿ ಚಿತ್ರಿಸುವುದನ್ನು ಮಾಧ್ಯಮಗಳು ಮತ್ತು ಸಂಬಂಧಪಟ್ಟವರು ನಿಲ್ಲಿಸಬೇಕು ಎಂದು ಕರೆ ನೀಡಿದರು. ದೇಶಕ್ಕೆ ಭಯೋತ್ಪಾದಕರು, ಮಾದಕ ವಸ್ತುಗಳ ಸರಬರಾಜುದಾರರು ನುಗ್ಗುತ್ತಿರುವುದು ಕಳವಳಕಾರಿ ನೈಜ ಮುಸಲ್ಮಾನ್ ಭಯೋತ್ಪಾದಕ,ದೇಶ ದ್ರೋಹಿ ಆಗಲು ಸಾಧ್ಯವಿಲ್ಲ ಇಸ್ಲಾಂ ಕೂಡ ಅದನ್ನು ಪ್ರತಿಪಾದಿಸಿದೆ ಎಂದರು.
ಪೇರಡ್ಕ ಗೂನಡ್ಕ ಜುಮಾ ಮಸೀದಿಯ ಖತೀಬರಾದ ಅಹ್ಮದ್ ನಈಂ ಫೈಝಿ ಅಲ್ ಮಅಬರಿಯವರು ಮುಖ್ಯ ಭಾಷಣ ನಡೆಸಿ ಮಾತನಾಡಿ, ಪೆಹಲ್ಗಾಂ ಭಯೋತ್ಪಾದಕ ದಾಳಿಯು ದೇಶದ ಪ್ರತಿಯೊಬ್ಬರ ಮೇಲೆ ನಡೆದ ದಾಳಿಯಾಗಿದೆ. ಆ ದುರ್ಘಟನೆಯಲ್ಲಿ ಮಡಿದ ಪ್ರತಿಯೊಬ್ಬರು ನಮ್ಮ ಸಹೋದರ ಸಹೋದರಿಯರಾಗಿದ್ದಾರೆ. ಉಗ್ರಗಾಮಿಗಳು ಯಾರೇ ಆಗಿರಲಿ ಅವರಿಗೆ ಧರ್ಮವಿಲ್ಲ. ಇಸ್ಲಾಮಿನ ತತ್ವಗಳ ಕುರಿತು ಎಳ್ಳಷ್ಟೂ ಅರಿವಿಲ್ಲದ ಮುಸ್ಲಿಂ ನಾಮಧಾರಿಗಳು ಧರ್ಮದ ಹೆಸರಿನಲ್ಲಿ ದುಷ್ಕೃತ್ಯಗಳನ್ನು ನಡೆಸಿದರೆ ಅದಕ್ಕೆ ಭಾರತೀಯ ಮುಸಲ್ಮಾನರು ಹೊಣೆಗಾರರಲ್ಲ, ಭಾರತೀಯ ಮುಸಲ್ಮಾನರಾದ ನಾವು ಅತ್ಯಂತ ತೀವ್ರವಾಗಿ ಈ ದಾಳಿಯನ್ನು ಖಂಡಿಸುತ್ತೇವೆ. ಉಗ್ರರನ್ನು ಮಟ್ಟ ಹಾಕಲು ಸರಕಾರ ಕೈಗೊಳ್ಳುವ ಯಾವುದೇ ಹಂತದ ಕ್ರಮವನ್ನೂ ನಾವು ಬೆಂಬಲಿಸುತ್ತೇವೆ. ಈ ಘಟನೆ ಯಾರ ನಿರ್ಲಕ್ಷದಿಂದ ನಡೆಯಿತು ಎಂಬುದರ ಕುರಿತು ಸಮರ್ಪಕ ತನಿಖೆ ನಡೆಯಬೇಕಿದೆ. ಈ ದುರ್ಘಟನೆಯನ್ನು ಮುಂದಿಟ್ಟು ಇಸ್ಲಾಮೋಫೋಬಿಯ ಹರಡುವ ವಿಕೃತ ಶಕ್ತಿಗಳ ಅಪಪ್ರಚಾರದಿಂದ ಮುಗ್ಧ ಭಾರತೀಯರು ಅಂತರ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಮಾತ್ ಉಪಾಧ್ಯಕ್ಷರಾದ ಟಿ ಬಿ ಹನೀಫ್, ಕಾರ್ಯದರ್ಶಿ ಪಿ ಕೆ ಉಮ್ಮರ್ ಗೂನಡ್ಕ, ಖಜಾಂಜಿ ಮೊಹಮ್ಮದ್ ಕುಂಞಿ ತೆಕ್ಕಿಲ್, ಪೇರಡ್ಕ,ಸಮಿತಿ ಸದಸ್ಯರುಗಳಾದ ಉಸ್ಮಾನ್, ಇಬ್ರಾಹಿಂ ಸೆಟ್ಟಿಯಡ್ಕ, ಪಾಂಡಿ ಉಸ್ಮಾನ್, ಡಿ ಎ ಮೊಯಿದು, ಹಾರಿಸ್ ಆಝರಿ, ಎಂ, ಆರ್ ಡಿ ಎ, ಪದಾಧಿಕಾರಿಗಳು ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು,ಗೂನಡ್ಕ ತೆಕ್ಕಿಲ್ ಶಾಲೆಯ ಹೆಚ್ ಎಂ ಸಂಪತ್, ರಹೀಮ್ ಬೀಜದಕಟ್ಟೆ, ಸಹಿತ ನೂರಕ್ಕೂ ಮಿಕ್ಕಿ ಜಮಅತ್ ಸದಸ್ಯರು ಪಾಲ್ಗೊಂಡರು.