ಮಂಗಳೂರು ಬಜ್ಪೆ ಕೊಲೆ ಪ್ರಕರಣ-ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಒತ್ತಾಯ…

ಮಂಗಳೂರು: ಮಂಗಳೂರಿನ ಬಜ್ಪೆ ಕಿನ್ನಿಪದವು ಪ್ರದೇಶದಲ್ಲಿ ರೌಡಿ ಶೀಟರ್ ಹಾಗು ಆರೋಪಿ ಸುಹಾಸ್ ಶೆಟ್ಟಿ ಎಂಬವರನ್ನು ದುಷ್ಕರ್ಮಿಗಳು ಮಾರಕವಾಗಿ ಕೊಚ್ಚಿ ಕೊಲೆ ಮಾಡಿರುವುದು ಖಂಡನೀಯ ಮತ್ತು ದುಃಖವನ್ನು ತಂದಿದೆ. ಯಾರನ್ನು ಕೊಲ್ಲುವ ಅಧಿಕಾರ ಯಾರಿಗೂ, ಯಾವುದೇ ಸಂಘಟನೆಗೂ ಇಲ್ಲ. ನ್ಯಾಯಾಲಯ ಕಾನೂನು ಮುಖಾಂತರ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ರೀತಿ ಆಗಬೇಕು. ಇದಕ್ಕೆ ಪೊಲೀಸ್ ಇಲಾಖೆ ಮತ್ತು ಕಾನೂನು ಇಲಾಖೆ ಹೆಚ್ಚು ಕ್ರಿಯಾಶೀಲವಾಗಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಒತ್ತಾಯಿಸಿದ್ದಾರೆ. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಜಿಲ್ಲೆಯಲ್ಲಿ ಕೋಮುವಾದಿಗಳ ಜಾತಿ ಧರ್ಮ ಪಕ್ಷ ನೋಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಇಲಾಖೆಯ ಮುಖ್ಯಸ್ಥರಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರಲ್ಲಿ ಕೆ ಟಿ ಎಂ ಶಾಹಿದ್ ತೆಕ್ಕಿಲ್ ದೂರವಾಣಿ ಮುಖಾಂತರ ಆಗ್ರಹಿಸಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶವದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಕ್ರಮ ಕೈಗೊಳ್ಳಲು ಗೃಹ ಇಲಾಖೆ ಕಾರ್ಯಪ್ರವರ್ತರಾಗಬೇಕು. ಗುಪ್ತಚರ ಇಲಾಖೆ ಹೆಚ್ಚು ಕ್ರಿಯಾಶೀಲ ಮತ್ತು ಜವಾಬ್ದಾರಿತವಾಗಿ ಕೆಲಸ ನಿರ್ವಹಿಸಲು ಮೇಲಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ಬೇಕಾದ ಎಲ್ಲಾ ಮುನ್ನೆಚ್ಚರಿಕೆ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಮನವಿ ಮಾಡಿದ್ದಾರೆ. ಜಿಲ್ಲೆಯ ಜನರಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಅವರು ಮನವಿ ಮಾಡಿದ್ದಾರೆ. ಘಟನೆಯನ್ನು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿ ಕೋಮು ಭಾವನೆ ಕೆರಳಿಸುತ್ತಿರುವ ನಾಯಕರ ಮೇಲೆ ಮತ್ತು ಮಾಧ್ಯಮಕ್ಕೆ ಕೋಮು ಭಾವನೆ ಕೆರಳಿಸುವ ಹೇಳಿಕೆಗಳನ್ನು ನೀಡಿದವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ ಪೊಲೀಸ್ ನಿರ್ದೇಶಕರಾದ ಅಲೋಕ್ ಮೋಹನ್ ಐ ಪಿ ಎಸ್ ಅವರಲ್ಲಿ ವಿನಂತಿಸಿದ್ದಾರೆ. ಜಿಲ್ಲೆಯಲ್ಲಿ ಆಗುತ್ತಿರುವ ಕೊಲೆ,ದರೋಡೆ,ಕೋಮುವಾದ, ಗುಂಡಾಗಿರಿ, ರೌಡಿಸಂ, ಮಾದಕ ದ್ರವ್ಯ ಸರಬರಾಜು ಜಿಲ್ಲೆಗೆ ಒಂದು ಕಪ್ಪು ಚುಕ್ಕೆ. ಈ ಬಗ್ಗೆ ಸರಕಾರ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸರ್ವ ಪಕ್ಷದ ನಾಯಕರ, ಧಾರ್ಮಿಕ ನಾಯಕರ, ಯುವ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಮೂರು ಧರ್ಮ ಗುರುಗಳನ್ನು ಕರೆಸಿ, ಸಭೆ- ಚರ್ಚೆ ನಡೆಸಿ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಕೋಮುವಾದಿ ಮತ್ತು ಕೆಲವು ಸ್ಥಾಪಿತ ಹಿತಾಶಕ್ತಿಗಳಿಂದ ಜಿಲ್ಲೆಗೆ ಘೋರ ದುರಂತದ ಅಪಾಯ ಇದೆ ಎಂದು ಸರಕಾರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಎಚ್ಚರಿಸಿದ್ದಾರೆ.