ಗುರುಪುರ ಕಾಲೇಜು – ಪಿಂಗಾರ ತುಳು ಸಂಘದ ಆಟಿದ ಕೂಟ…

ಆಟಿ ಅನಿಷ್ಟವಲ್ಲ; ಬದುಕಿಗೆ ನಿಷ್ಠ: ಭಾಸ್ಕರ ರೈ ಕುಕ್ಕುವಳ್ಳಿ...

ಮಂಗಳೂರು: ‘ಅನ್ಯ ಉದ್ಯೋಗವಿಲ್ಲದೆ ಕೇವಲ ಕೃಷಿ ಕಾಯಕದಲ್ಲಿ ತೊಡಗಿದ್ದ ನಮ್ಮ ಹಿರಿಯರು ತೀರಾ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಿದ್ದ ಕಾಲ ಆಟಿ. ಆಗ ತೀವ್ರ ಬಡತನ, ನಿರುದ್ಯೋಗ ಮತ್ತು ರೋಗರುಜಿನಗಳಿಂದ ಜನ ನರಳುತ್ತಿದ್ದರು. ಆದರೆ ಆಟಿ ಅನಿಷ್ಟವೆಂದು ಅವರೆಂದೂ ಭಾವಿಸಿರಲಿಲ್ಲ; ಅದು ಅವರ ಬದುಕಿಗೆ ನಿಷ್ಠವಾಗಿತ್ತು. ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನೇ ಸೇವಿಸಿ ದಿನ ದೂಡುತ್ತಿದ್ದವರಿಗೆ ಆಹಾರವೇ ಔಷಧಿಯೂ ಆಗಿತ್ತು’ ಎಂದು ವಿಶ್ರಾಂತ ಪ್ರಾಧ್ಯಾಪಕ, ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ‘ಪಿಂಗಾರ’ ತುಳು ಸಂಘದ ಆಶ್ರಯದಲ್ಲಿ ಜರಗಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಟಿಪಳ್ಳ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಅನುಸೂಯ ಕೆ.ಪಿ. ತೆಂಗಿನ ಗರಿ ಅರಳಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಾಲ್ಯಪದವು ಸರಕಾರಿ ಕಿರಿಯ ಕಾಲೇಜಿನ ಇತಿಹಾಸ ಉಪನ್ಯಾಸಕ ಕೇಶವ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕಿಶೋರಿ ಬಿ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕಿ ವಯೋಲಾ ಸಿಕ್ವೇರಾ, ವಿದ್ಯಾರ್ಥಿ ನಾಯಕರಾದ ಚರಣ್ ರಾಜ್ ಮತ್ತು ಚೈತನ್ಯ ವೇದಿಕೆಯಲ್ಲಿದ್ದರು.
‘ಪಿಂಗಾರ’ ತುಳು ಸಂಘದ ಸಂಚಾಲಕ, ಉಪನ್ಯಾಸಕ ಗಿರೀಶ್ ಎಂ. ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ವೇದಾ ಎಂ. ವಂದಿಸಿದರು. ವಿಧ್ಯಾರ್ಥಿನಿ ವೈದೇಹಿ ರಾವ್ ನಿರೂಪಿಸಿದರು. ಶಾಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಂದ ಆಟಿ ವಿಶೇಷತೆ ಬಗ್ಗೆ ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

whatsapp image 2025 07 30 at 1.24.54 pm (1)

whatsapp image 2025 07 30 at 1.26.08 pm

Related Articles

Back to top button