ನಮ್ಮತನದ ಆತ್ಮಾಭಿಮಾನ ಬೆಳೆಯಲಿ: ರಾಘವೇಶ್ವರ ಶ್ರೀ ಆಶಯ…

ಗೋಕರ್ಣ: ಪರಕೀಯರ ದಾಸ್ಯದ ಭಾವನೆಯಿಂದ ಹೊರಬಂದು ಪ್ರತಿಯೊಬ್ಬರೂ ಹೃದಯದಲ್ಲಿ ನಮ್ಮತನದ ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 25ನೇ ದಿನವಾದ ಭಾನುವಾರ ಉತ್ತರ ಬೆಂಗಳೂರು ಮಂಡಲದ ವಿದ್ಯಾರಣ್ಯ, ಯಲಹಂಕ, ಸಂಜಯ, ಕೃಷ್ಣರಾಜ ಮತ್ತು ಸರ್ವಜ್ಞ ವಲಯಗಳ ಶಿಷ್ಯಭಕ್ತರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಸತ್‍ಚಿಂತನೆಗಳಿಗೆ ನಮ್ಮ ಹೃದಯ ಸದಾ ತೆರೆದುಕೊಂಡಿರಲಿ; ನಮ್ಮ ದೇಶ, ಭಾಷೆ, ಸಂಸ್ಕೃತಿ, ಪರಂಪರೆ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಭಾಷಾ ಶುದ್ಧತೆಯಿಂದ ಆರಂಭವಾಗಲಿ ಎಂದು ಆಶಿಸಿದರು.
ಇಂಗ್ಲಿಷ್ ಬಳಕೆ ವ್ಯಾಪಕವಾಗಿ ಇಲ್ಲದ ರಷ್ಯಾದಲ್ಲಿ ಬಾಹ್ಯಾಕಾಶದಂಥ ವಿಜ್ಞಾನ ವಿಷಯಗಳನ್ನು ಕೂಡಾ ರಷ್ಯನ್ ಭಾಷೆಯಲ್ಲೇ ಬೋಧಿಸಲಾಗುತ್ತದೆ. ಅಂತೆಯೇ ನಮ್ಮಲ್ಲೂ ಇಂಗ್ಲಿಷ್ ಮೇಲು ಎಂಬ ಮನೋಭಾವದಿಂದ ಹೊರಬಂದು ಸ್ವಭಾಷೆಯನ್ನು ಉತ್ತೇಜಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಭಾಷಾ ದಾಸ್ಯ ತೊರೆದು ನಮ್ಮ ಭಾಷೆ ಶುದ್ಧ ಮಾಡಿಕೊಳ್ಳೋಣ. ನಮ್ಮ ಭಾಷೆಯ ಶುದ್ಧತೆ ಉಳಿಸಿಕೊಳ್ಳದಿದ್ದರೆ ಮುಂದಿನ ತಲೆಮಾರಿನ ವೇಳೆಗೆ ನಮ್ಮ ಭಾಷೆಯೇ ನಶಿಸಿ ಹೋಬಹುದು. ಆದ್ದರಿಂದ ಬದಲಾವಣೆಗೆ ಎಲ್ಲರೂ ಸಜ್ಜಾಗಬೇಕು ಎಂದು ಕರೆ ನೀಡಿದರು.
ದಿನಕ್ಕೊಂದು ಇಂಗ್ಲಿಷ್ ಪದ ತ್ಯಜಿಸುವ ಅಭಿಯಾನದಲ್ಲಿ, ಬಕೆಟ್ ಎಂಬ ಸಾಮಾನ್ಯ ಬಳಕೆಯಲ್ಲಿರುವ ಪದದ ಬಗ್ಗೆ ವಿಶ್ಲೇಷಣೆ ನೀಡಿ, ಸಾಮಾನ್ಯವಾಗಿ ಬಾಲ್ದಿ ಎಂಬ ಪದ ಬಳಕೆಯಲ್ಲಿದೆ. ಬಹುತೇಕ ಭಾರತೀಯ ಭಾಷೆಗಳಲ್ಲಿ ಈ ಪದ ಬಳಕೆಯಲ್ಲಿದೆ. ಇದು ಪೋರ್ಚ್‍ಗೀಸ್ ಮೂಲದ ಪದ. ಸಂಸ್ಕøತದಲ್ಲಿ ದ್ರೋಣಿ ಎಂಬ ಶಬ್ದ ಬಳಕೆಯಲ್ಲಿದೆ. ಬಾನಿ ಎಂಬ ಪದ ಹಿಂದೆ ಕನ್ನಡದಲ್ಲಿ ಬಳಕೆಯಲ್ಲಿತ್ತು. ಈ ಎರಡೂ ಶಬ್ದಗಳನ್ನು ಬಳಸಬಹುದು. ದಕ್ಷಿಣ ಕನ್ನಡದಲ್ಲಿ ಕವಂಗ ಎಂಬ ಪದ ಬಳಕೆಯಲ್ಲಿದ್ದು, ಇದನ್ನೂ ಬಳಸಬಹುದು ಎಂದು ಸಲಹೆ ಮಾಡಿದರು.
ಶಂಕರಾಚಾರ್ಯರ ಕನಸುಗಳನ್ನು ನನಸುಗೊಳಿಸುವ ಉದ್ದೇಶದಿಂದ ಆಚಾರ್ಯ ಭಗವತ್ಪಾದರು ಸ್ಥಾಪಿಸಿದ ಈ ಮಠ, ಶಂಕರರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಶ್ರೀಮಠದ ಪ್ರತಿಯೊಬ್ಬ ಶಿಷ್ಯರು ಈ ಕಾರ್ಯಕ್ಕೆ ಕೊಡುಗೆ ನೀಡಬೇಕು ಎಂದರು.
ಗುರುತತ್ವದ ಕೃಪೆ ಇದ್ದರೆ ನಮಗೆ ಮುಂದಿನ ದಾರಿ ತೋರುತ್ತದೆ. ಪ್ರಭು ಶ್ರೀರಾಮ ಸಮಸ್ತ ಸಮಾಜಕ್ಕೆ ಶಕ್ತಿ ವೃದ್ಧಿಸಲಿ. ಗುರು ಹಾಗೂ ರಾಮತತ್ವಗಳು ನಮ್ಮ ಬಾಳಿಗೆ ಬೆಳಕಾಗುತ್ತವೆ ಎಂದು ಬಣ್ಣಿಸಿದರು. ಪದೇ ಪದೇ ಮಠಕ್ಕೆ ಶಿಷ್ಯರು ಬರುತ್ತಿದ್ದರೆ, ಬಾಳಿಗೆ ಅಗತ್ಯವಾದ ಚೈತನ್ಯ ಲಭ್ಯವಾಗುತ್ತದೆ. ಚಾತುರ್ಮಾಸ್ಯ ಗುರುದರ್ಶನಕ್ಕೆ ಯೋಗ್ಯ ಕಾಲ ಎಂದು ಬಣ್ಣಿಸಿದರು.
ಅನಿವಾರ್ಯ ಕಾರಣಗಳಿಂದ ಊರು ತೊರೆದು ನಗರ ಸೇರಿರುವ ಶಿಷ್ಯರು ಮೂಲದಿಂದ ಕಳಚಿಕೊಂಡಿದ್ದಾರೆ, ಅವರನ್ನು ಮತ್ತೆ ಶ್ರೀಮಠದ ಸಂಪರ್ಕಕ್ಕೆ ತರುವ ಕಾರ್ಯ ಆಗಬೇಕು ಎಂದು ಆಶಿಸಿದರು. ಹವ್ಯಕ ಸಮಾಜ ಚಿಕ್ಕದಾದರೂ, ಭವ್ಯ ಪರಂಪರೆ ಹೊಂದಿದೆ. ದೇಶಕ್ಕೇ ಬೆಳಗಾಗಬಹುದಾದ ಈ ಸಮುದಾಯ ಕ್ಷಯಿಸಬಾರದು; ಇದನ್ನು ಬೆಳೆಸುವ ಹೊಣೆ ನಮ್ಮೆಲ್ಲರದು ಎಂದು ಹೇಳಿದರು.
ಗುರುಸೇವೆ ಎನ್ನುವುದು ಆತ್ಮದ ದೀಪ ಹಚ್ಚುವಂಥದ್ದು; ಆದ್ದರಿಂದ ಮಠದ ಪ್ರತಿಯೊಬ್ಬ ಶಿಷ್ಯ ಒಂದಲ್ಲ ಒಂದು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು. ಪ್ರತಿಯೊಬ್ಬರಿಗೂ ಸೇವೆಯ ಅವಕಾಶವನ್ನು ಕಲ್ಪಿಸಿಕೊಡಲು ಘಟಕ, ವಲಯ, ಮಂಡಲಗಳು ಶ್ರಮಿಸಬೇಕು ಎಂದು ಸೂಚಿಸಿದರು.
ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ, ಉದ್ಯಮಿ ಶ್ರೀಪತಿ ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪಿಆರ್‍ಓ ಎಂ.ಎನ್.ಮಹೇಶ ಭಟ್, ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button