ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು: ಸೈಬರ್ ಅಪರಾಧದ ಒಳನೋಟಗಳು- ಜಾಗೃತಿ ಕಾರ್ಯಕ್ರಮ…

ಪುತ್ತೂರು: ಆಧುನಿಕ ಸಮಾಜದಲ್ಲಿ ಸೈಬರ್ ಅಪರಾಧ ಹಾಗೂ ಮಾದಕ ದ್ರವ್ಯಗಳ ಬಳಕೆ ವ್ಯಾಪಕವಾಗಿ ಹೆಚ್ಚಳವನ್ನು ಕಂಡಿದ್ದು, ಇದು ವ್ಯಕ್ತಿಯೊಬ್ಬನ ಚಾರಿತ್ರ್ಯ ಹಾಗೂ ಹಣಕಾಸಿನ ಮೂಲವನ್ನು ನಾಶಮಾಡುತ್ತವೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ಪ್ರತಿಯೊಬ್ಬರೂ ಸೈಬರ್ ಕ್ರೈಂ ಬಗ್ಗೆ ತಿಳುವಳಿಕೆ ಹೊಂದುವುದು ಆವಶ್ಯಕ ಎಂದು ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‍ಐ ಉದಯ ರವಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿಯ ಆಶ್ರಯದಲ್ಲಿ ಆ.19 ರಂದು ನಡೆದ ಆನ್ಲೈನ್‍ನಲ್ಲಿ ಸುರಕ್ಷಿತವಾಗಿರಿ ಎನ್ನುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವಾಗ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಾಯಿತೋ ಅದರ ಜತೆಯಲ್ಲಿ ಈ ಅಪರಾಧ ಪ್ರಕರಣಗಳೂ ಹೆಚ್ಚಾಯ್ತು. ಆನ್ಲೈನ್ ಮೂಲಕ ಮಕ್ಕಳ ದೌರ್ಜನ್ಯ, ಇಚ್ಚೆಗೆ ವಿರುದ್ದವಾಗಿ ಮಾನಸಿಕ ಹಿಂಸೆಯನ್ನು ನೀಡುವುದು, ಡೇಟಿಂಗ್ ಆಪ್ ಮೂಲಕ ತೊಂದರೆಯನ್ನು ನೀಡುವುದು, ಉದ್ಯೋಗದ ಆಮಿಷವೊಡ್ಡಿ ಹಣ ಸಂಗ್ರಹಿಸುವುದು, ಅಧಿಕ ಲಾಭಾಂಶದ ನೆಪದಿಂದ ಹೂಡಿಕೆ ಮಾಡಿಸುವುದು, ಡಿಜಿಟಲ್ ಅರೆಸ್ಟ್, ಫೋನ್ ಮೂಲಕ ಒಟಿಪಿಗಳನ್ನು ಸಂಗ್ರಹಿಸಿ ಹಣ ಲಪಟಾಯಿಸುವುದು ಇವೇ ಮೊದಲಾದ ಅಪರಾಧಗಳು ಸಾಮಾನ್ಯವಾಗಿದ್ದು, ಇದರ ಕಡಿವಾಣಕ್ಕಿರುವ ಕಟ್ಟುನಿಟ್ಟಿನ ಕಾಯ್ದೆಯ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದರು. ನೀವು ಬಳಸುವ ಸಾಫ್ಟ್ ವೇರ್ ಗಳನ್ನು, ಆಪರೇಟಿಂಗ್ ಸಿಸ್ಟಮ್‍ಗಳನ್ನು ಕಾಲಕಾಲಕ್ಕೆ ಉನ್ನತೀಕರಿಸುವುದು, ಆಂಟಿ-ವೈರಸ್‍ಗಳನ್ನು ಬಳಸುವುದು, ಆಗಾಗ ಪಾಸ್ವರ್ಡ್‍ಗಳನ್ನು ಬದಲಿಸುವುದು ಮತ್ತು ಬಲವಾದ ಪಾಸ್ವರ್ಡ್‍ಗಳನ್ನು ಬಳಸುವುದು, ವಾಟ್ಸಾಪ್ ಅಥವಾ ಇ-ಮೈಲ್‍ಗಳಲ್ಲಿ ಬರುವ ಅಪರಿಚಿತ ಲಿಂಕ್‍ಗಳನ್ನು ಬಳಸದೇ ಇರುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಸುರಕ್ಷಿತ ವೈಫೈ ನೆಟ್ವರ್ಕ್‍ಗಳನ್ನು ಬಳಸದೇ ಇರುವುದರಿಂದ ಸೈಬರ್ ಅಪರಾಧಗಳಿಗೆ ತುತ್ತಾಗದೇ ಇರಬಹುದು ಎಂದರು. ಸೈಬರ್ ಭದ್ರತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಅಪರಾಧಗಳಿಗೆ ಒಳಗಾದಾಗ ತಕ್ಷಣಕ್ಕೆ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿದರೆ ಏನೂ ತೊಂದರೆಯಾಗದು ಎಂದು ಕಿವಿಮಾತನ್ನೂ ಅವರು ಹೇಳಿದರು.
ಸೈಬರ್ ಅಪರಾಧಗಳ ಒಳನೋಟಗಳು ಈ ವಿಷಯದ ಬಗ್ಗೆ ನಮ್ಮ ಆತ್ಮವನ್ನು ಉಳಿಸಿ ಎನ್ನುವ ಕಿರುಚಿತ್ರದ ಮೂಲಕ ನಟ ಹಾಗೂ ನಿರ್ದೇಶಕ ಅಚಲ್ ಭಟ್ ಉಬರಡ್ಕ ಮಾಹಿತಿ ನೀಡಿದರು. ತುರ್ತು ಸಂದರ್ಭಗಳಲ್ಲಿ ನಮ್ಮ ಮೊಬೈಲ್ ಫೋನ್ ಗಳಲ್ಲಿರುವ SOS ಸೌಲಭ್ಯ, 112 ಪೊಲೀಸ್ ಹೆಲ್ಪ್ ಲೈನ್ ಸೇವೆಯ ಮಹತ್ವದ ಬಗ್ಗೆ ತಿಳಿಸಿದರು.
ಕಾಲೇಜು ಆಂತರಿಕ ದೂರು ಸಮಿತಿಯ ಸಂಚಾಲಕಿ ಹಾಗೂ ಡಾಟಾ ಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ.ರೂಪಾ.ಜಿ.ಕೆ ಮತ್ತು ಕಾರ್ಯಕ್ರಮ ಸಂಯೋಜಕ ಪ್ರೊ.ಅಜಯ್ ಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಿಶೆಲ್ ಜಾಸ್ಮಿನ್ ಡಿ’ಸೋಜ ಸ್ವಾಗತಿಸಿ, ವಂದಿಸಿದರು. ಕ್ಷಿತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

cyber security (2)

Related Articles

Back to top button