ರಕ್ತದಾನ ಪುಣ್ಯದ ಕೆಲಸ – ಡಾ.ಪ್ರಭಾಕರ ಭಟ್…

ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಎನ್ನೆಸ್ಸೆಸ್ ಹಾಗೂ ರೆಡ್ ಕ್ರಾಸ್ ಘಟಕದ ವತಿಯಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಸಹಯೋಗದಲ್ಲಿ, ಪಾಂಚಜನ್ಯ ಹಿರಿಯ ವಿದ್ಯಾರ್ಥಿಗಳ ಸಂಘ, ರಿಕ್ಷಾ ಚಾಲಕ- ಮಾಲಕರ ಸಂಘ ಕಲ್ಲಡ್ಕ ಇವರ ಸಹಕಾರದಲ್ಲಿ ಬೃಹತ್ ರಕ್ತದಾನ ಶಿಬಿರ ಕಲ್ಲಡ್ಕದಲ್ಲಿ ಜರಗಿತು.
ಕೆ.ಎಂ.ಸಿ. ಮಂಗಳೂರು ಅತ್ತಾವರ ಇದರ ತಾಂತ್ರಿಕ ತಜ್ಞರಾದ ರಾಘವೇಂದ್ರ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇನ್ನೊಬ್ಬರ ಬದುಕಿಗಾಗಿ ತನ್ನ ಬದುಕಿನ ಒಂದು ಭಾಗವನ್ನು ಕೊಡುವುದು ಪುಣ್ಯದ ಕೆಲಸ. ರಕ್ತದಾನ ಮಾಡಿ ರಕ್ತದ ಅವಶ್ಯಕತೆಯಿದ್ದವರಿಗೆ ನೀಡುವುದು ಶ್ರೇಷ್ಠ ಕಾರ್ಯ ಎಂದು ಹೇಳಿದರು. ಪಾಂಚಜನ್ಯ ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷ ರಾಜೇಶ್ ನರಿಂಗಾಣ, ಶ್ರೀರಾಮ ಸೌಹಾರ್ದ ಸಹಕಾರಿ ಸಂಘ ಕಲ್ಲಡ್ಕದ ಅಧ್ಯಕ್ಷ ನಾರಾಯಣ ಶೆಟ್ಟಿ ಕುಲ್ಯಾರ್, ರಿಕ್ಷಾ ಚಾಲಕ-ಮಾಲಕರ ಸಂಘ, ಕಲ್ಲಡ್ಕದ ಸದಸ್ಯ ಜಯಂತ ಸುಧೆಕಾರ್ ಅಭ್ಯಾಗತರಾಗಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ವೇದಿಕೆಯಲ್ಲಿದ್ದರು. ವಿದ್ಯಾರ್ಥಿ ಜಯಸೂರ್ಯ ಸ್ವಾಗತಿಸಿ, ಯಜ್ಞೇಶ್ ವಂದಿಸಿದರು.
ವಿಭಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಅಕ್ಷತಾ ಲಕ್ಷ್ಮೀ ಪ್ರಾರ್ಥಿಸಿದರು.