ಗಿರಿಗಿಟ್ ತುಳು ಸಿನಿಮಾ ವಿವಾದ ಪರಿಹಾರ…..
ಮಂಗಳೂರು: ಗಿರಿಗಿಟ್ ಸಿನೆಮಾಕ್ಕೆ ತಡೆಯಾಜ್ಞೆ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್.ನರಸಿಂಹ ಹೆಗ್ಡೆ ಮತ್ತು ಗಿರಿಗಿಟ್ ಸಿನೆಮಾ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾನೂನಿನ ಅರಿವಿನ ಕೊರತೆಯಿಂದ ಚಿತ್ರದಲ್ಲಿ ತಪ್ಪಾಗಿದೆ ಎಂದು ಗಿರಿಗಿಟ್ ಚಿತ್ರತಂಡ ಕ್ಷಮೆ ಯಾಚಿಸಿದೆ. ಆಕ್ಷೇಪಾರ್ಹವಾದ ಸಂಭಾಷಣೆಯನ್ನು ಮೂರು ದಿನಗಳಲ್ಲಿ ಮ್ಯೂಟ್ ಮಾಡಲು, ಆಕ್ಷೇಪಾರ್ಹ ದೃಶ್ಯಗಳನ್ನು 40 ದಿನಗಳಲ್ಲಿ ತೆಗೆದುಹಾಕಲು ಚಿತ್ರತಂಡ ಒಪ್ಪಿಕೊಂಡಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಲಾಗಿದೆ. ಚಿತ್ರತಂಡ ಷರತ್ತುಗಳನ್ನು ಪೂರೈಸಿದ ಬಳಿಕ ವಕೀಲರ ಸಂಘ ದಾವೆ ಹಿಂಪಡೆಯಲಿದೆ ಎಂದು ನರಸಿಂಹ ಹೆಗ್ಡೆ ತಿಳಿಸಿದರು.
ಮುಂದಿನ ಮೂರು ದಿನಗಳೊಳಗೆ ಆಕ್ಷೇಪಾರ್ಹ ಎಂದು ಆರೋಪಿಸಲಾದ ಸಂಭಾಷಣೆಗಳನ್ನು ಮ್ಯೂಟ್ ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ವಕೀಲರ ಸಂಘಕ್ಕೆ ಮನವರಿಕೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಕೀಲರ ಬಗ್ಗೆ ಯಾರೂ ಕೀಳಾಗಿ ಪೋಸ್ಟ್ ಮಾಡಬಾರದು ಎಂದು ಸಿನೆಮಾ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಮನವಿ ಮಾಡಿದರು.
ಮಂಗಳೂರು ವಕೀಲರ ಸಂಘದ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ., ಎಂ.ಪಿ.ಶೆಣೈ, ಗಿರಿಗಿಟ್ ಚಿತ್ರತಂಡದ ಮಂಜುನಾಥ ಅತ್ತಾವರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.