ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಯೋಗ ಗುರು ಬಾಬಾ ರಾಮ್‍ದೇವ್ ಭೇಟಿ…..
ಬಂಟ್ವಾಳ : ಯೋಗ ಗುರು ರಾಮ್‍ದೇವ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನ.20 ರಂದು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಪುಷ್ಪ ಮಾಲೆ ಹಾಕಿ ಸ್ವಾಗತಿಸಿದರು. ಬಳಿಕ ಮೆರವಣಿಗೆಯಲ್ಲಿ ಅವರನ್ನು ಕರೆತರಲಾಯಿತು. ವಿದ್ಯಾಕೇಂದ್ರ ವಠಾರದಲ್ಲಿ ಗೋಪೂಜೆ ನೆರವೇರಿಸಿ ಕಪಿಲೆ ಮತ್ತು ದನ ಕರುವಿಗೆ ಬಾಳೆಹಣ್ಣು, ಬೆಲ್ಲ, ಮೊಳಕೆ ಬರಿಸಿದ ಹುರುಳಿ ಮತ್ತು ಕಡಲೆಯ ಆಹಾರ ನೀಡಿದರು.
ಪ್ರಾಥಮಿಕ ಶಿಕ್ಷಾವರ್ಗಕ್ಕೆ ಭೇಟಿ ನೀಡಿ ಮಕ್ಕಳ ಕಾರ್ಯಚಟುವಟಿಕೆ, ವಿದ್ಯಾರ್ಜನೆಯ ಕ್ರಮ ವೀಕ್ಷಣೆ ಮಾಡಿದರು.
ಸಭಾಂಗಣದಲ್ಲಿ ವಿದ್ಯಾರ್ಥಿನಿಯರ ಜಡೆ ಕೋಲಾಟ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಈಸ್ಟ್ ಇಂಡಿಯಾ ಕಂಪೆನಿ ಭಾರತೀಯ ಸಂಸ್ಕøತಿಯನ್ನು ಮತ್ತು ನಮ್ಮ ಭೌತಿಕ ಸಂಪತನ್ನು ಲೂಟಿ ಮಾಡಿದೆ. ಆಧುನಿಕ ಭಾರತದಲ್ಲಿ ಚಿಕ್ಕ ವಸ್ತುವಿನಿಂದ ಹಿಡಿದು ಎಲ್ಲ ವಸ್ತುಗಳು ಭಾರತೀಯ ಮಾರುಕಟ್ಟೆಗೆ ಆಮದು ಆಗುತ್ತಿದ್ದವು. ದೇಶವನ್ನು ವಿದೇಶಿ ಕಂಪೆನಿಗಳು ಅಕ್ಷರಃ ಲೂಟಿ ಮಾಡುತ್ತಿದ್ದವು. ಇದನ್ನು ಕಂಡು ಸ್ವದೇಶಿ ಚಿಂತನೆಯ ಪ್ರೇರಣೆ ಉಂಟಾಯಿತು ಎಂದರು.
ಆಯೋಧ್ಯೆ ಮಂದಿರ ನಿರ್ಮಾಣದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ವಿದ್ಯಾರ್ಥಿ ಜೆನಿತ್ ಪ್ರಶ್ನಿಸಿದಾಗ ಉತ್ತರಿಸಿದ ಅವರು ಶ್ರೀರಾಮ ಮರ್ಯಾದೆಯ ಪ್ರತೀಕ, ಸಹಸ್ರಾರು ವರ್ಷಗಳ ಇತಿಹಾಸ ಇರುವ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತದೆ. ಜೀವನದಲ್ಲಿ ಒಮ್ಮೆ ನಾವು ಅಲ್ಲಿಗೆ ಸಂದರ್ಶನ ನೀಡುವ ಮೂಲಕ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಗಾಧ ನೆನಪು ಶಕ್ತಿ ಮತ್ತು ಜ್ಞಾನ ಶಕ್ತಿಯನ್ನು ನೀವು ಹೊಂದಿದ್ದೀರಿ. ವಿದ್ಯಾರ್ಥಿಗಳು ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂದು ವಿದ್ಯಾರ್ಥಿನಿ ಕ್ಷಮಾ ಪ್ರಶ್ನಿಸಿದಾಗ, ನಸುನಗುತ್ತಾ ಉತ್ತರಿಸಿದ ಯೋಗಗುರು ಎರಡು ಮೂಗಿನ ಹೊಳ್ಳೆಗಳಲ್ಲಿ ಉಸಿರಾಡುವ ಪ್ರಾಣಾಯಾಮದ ಕ್ರಮವನ್ನು ತೋರಿಸಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್., ಪ್ರಾಂಶುಪಾಲ ಕೃಷ್ಣಪ್ರಸಾದ್ ಮತ್ತು ಶಾಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.