ಸೂಡ ಮೇಳದ ದಶಮ ಸಂಭ್ರಮ – ಯಕ್ಷಗಾನ ಸಪ್ತಾಹ…
ಯಕ್ಷಗಾನ ಮೇಳಗಳಿಂದ ಜನರಿಗೆ ಕಲಾ ಸಂಸ್ಕಾರ: ಡಾ|ಜೋಶಿ...
ಸೂಡ: ‘ಯಕ್ಷಗಾನ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಂರಕ್ಷಣೆ, ಸಂವರ್ಧನೆ ಮತ್ತು ವಿಸ್ತರಣೆ ಮಾಡಿ ಮುಂದಿನ ಜನಾಂಗಕ್ಕೆ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಕ್ಷಗಾನದ ಗುಣಮಟ್ಟ ಮತ್ತು ಸೌಂದರ್ಯವನ್ನು ವರ್ಧಿಸುವ ಕೆಲಸವನ್ನು ತಿರುಗಾಟಕ್ಕೆ ಹೊರಟ ಸೂಡ ಮೇಳ ನಡೆಸುತ್ತಿದ್ದು, ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಿ,ಜನರಿಗೆ ಕಲಾಸಂಸ್ಕಾರ ನೀಡುವ ಪ್ರಯತ್ನ ಮಾಡಿದೆ’ ಎಂದು ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಮತ್ತು ಬಹುಶ್ರುತ ವಿದ್ವಾಂಸ ಡಾ|ಎಂ.ಪ್ರಭಾಕರ ಜೋಶಿ ಹೇಳಿದರು.
ಸೂಡ ಮಯೂರವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ದಶಮ ಸಂಭ್ರಮ, ಸಪ್ತಾಹ ಮತ್ತು 10ನೇ ವರ್ಷದ ತಿರುಗಾಟ ಶುಭಾರಂಭ ಸಂದರ್ಭ ಸೂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸೂಡ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಶಿರ್ವ ಕೋಡು ಜಯಶೀಲ ಹೆಗ್ಡೆ ಮೇಳದ ಸಂಚಾಲಕ ಮತ್ತು ಭಾಗವತ ಸೂಡ ಹರೀಶ್ ಶೆಟ್ಟಿ ಅವರಿಗೆ ಜಾಗಟೆ, ಗಂಟೆ ನೀಡಿ ಯಕ್ಷಗಾನ ತಿರುಗಾಟಕ್ಕೆ ಚಾಲನೆ ನೀಡಿದರು.
ಮಾದರಿ ಉಪಕ್ರಮ:
ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ , ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಮಾತುಗಳನ್ನಾಡಿ, ‘ಸೂಡ ಮೇಳವು ತನ್ನ ಹತ್ತನೇ ವರ್ಷದ ತಿರುಗಾಟದ ಆರಂಭದಲ್ಲಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ. ಇದೊಂದು ಉತ್ತಮ ಉಪಕ್ರಮ; ಭಾಗವತ ಹರೀಶ್ ಶೆಟ್ಟರು ತಮ್ಮ ವೃತ್ತಿಯ ಜೊತೆಗೆ ಮೇಳದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸುವುದರೊಂದಿಗೆ ಕಳೆದ 40 ವರ್ಷಗಳಿಂದ ಸೂಡದಲ್ಲಿ ಕನ್ನಡ ಹಾಗೂ ತುಳು ಭಾಷೆಯ ಯಕ್ಷಗಾನ ಬಯಲಾಟ, ತಾಳಮದ್ದಳೆ, ವಿಚಾರಗೋಷ್ಠಿ, ಯಕ್ಷಕವಿ ಮೇಳ, ಕಾರ್ಯಾಗಾರಗಳನ್ನು ಸಂಘಟಿಸಿ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿರುವುದು ಅಭಿನಂದನಾರ್ಹವಾದುದು’ ಎಂದರು.
ಸನ್ಮಾನ:
ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ದಂಪತಿ, ಮುಖ್ಯ ಅತಿಥಿ ನಿಂಜೂರು ಮಾಳಿಗೆಮನೆ ರವೀಂದ್ರ ಹೆಗ್ಡೆ ಮತ್ತು ಮೇಳದ ಸಂಚಾಲಕ ಹರೀಶ್ ಶೆಟ್ಟಿ ಸೂಡ ಅವರನ್ನು ಸೂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ಸ್ಮಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿ ರವೀಂದ್ರ ಹೆಗ್ಡೆ ನಿಂಜೂರು ಮತ್ತು ಕಾಪು ತಾ।ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ, ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷ ರಿತೇಶ್ ಕುಮಾರ್ ಶೆಟ್ಟಿಸೂಡ ಮಾತನಾಡಿದರು. ಮೇಳದ ಸಂಚಾಲಕ, ಭಾಗವತ ಸೂಡ ಹರೀಶ್ ಶೆಟ್ಟಿಸ್ವಾಗತಿಸಿ,ವಂದಿಸಿದರು. ಶಿಕ್ಷಕ ರಮೇಶ್ ಕೆ.ಎಸ್ ನಿರೂಪಿಸಿದರು.
ಯಕ್ಷಗಾನ ಬಯಲಾಟ:
ಸಪ್ತಾಹದ ಅಂಗವಾಗಿ ತಿರುಗಾಟದ ಮೊದಲ ಪ್ರದರ್ಶನ ನಿಂಜೂರು ಮಾಳಿಗೆಮನೆ ಮಾಧವ ಹೆಗ್ಡೆ ಸ್ಮರಣಾರ್ಥ ಮಕ್ಕಳಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು. ದಶಂಬರ 12ರ ವರೆಗೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಠಾರದಲ್ಲಿ ಸೂಡ ಶ್ರೀ ಮಯೂರವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ವಿವಿಧ ಪ್ರಸಂಗಗಳ ಬಯಲಾಟ ನಡೆಯಲಿದೆ.







