ಡಿ.12 – ಮಂಗಳೂರು ಮೀನು ಸಾಗಾಟ ಲಾರಿಗಳ ಮುಷ್ಕರ…
ಮಂಗಳೂರು :ಮೀನು ಸಾಗಾಟದ ಲಾರಿಗಳಿಗೆ ಇಲಾಖೆ ಹಾಗೂ ಸಾರ್ವಜನಿಕರಿಂದ ತೊಂದರೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಡಿ.12ರಂದು 24 ಗಂಟೆಗಳ ಕಾಲ ಮೀನು ಸಾಗಾಟ ಲಾರಿಗಳ ಮುಷ್ಕರ ನಡೆಸಲಾಗುವುದು ಎಂದು ಮೋಟಾರ್ ಟ್ರಾನ್ಸ್ ಪೋರ್ಟ್ ಮತ್ತು ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ ಇದರ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ದಿನ 11 ಗಂಟೆಗೆ ಮಿನಿ ವಿಧಾನಸೌಧದಿಂದ ಚಾಲಕರು ಮೆರವಣಿಗೆ ಹೊರಟು ಜಿಲಕ್ಲಾಧಿಕಾರಿ ಕಚೇರಿಯ ಬಳಿ ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಲಾಗುವುದು.ಈ ಹಿಂದೆ ಮೀನು ಸಾಗಾಟದ ಲಾರಿಗಳಲ್ಲಿ ತ್ಯಾಜ್ಯ ನೀರು ಸಂಗ್ರಹ ಮಾಡುವ ಕ್ರಮ ಇಲ್ಲದುದ್ದರಿಂದ ನೀರನ್ನು ಪೈಪ್ ಮುಖೇನ ರಸ್ತೆಗೆ ಬಿಡಲಾಗುತ್ತಿತ್ತು. ಕೆಲವು ವರ್ಷಗಳಿಂದ ಲಾರಿಗಳಲ್ಲಿ ನೀರು ಸಂಗ್ರಹ ಮಾಡಲು 400 ಲೀಟರ್‌ನ ಟ್ಯಾಂಕರ್‌ನ ವ್ಯವಸ್ಥೆ ಮಾಡಲಾಗಿದೆ. ಆದರೆ ದೂರದ ಊರಿನಿಂದ ಮೀನಿನ ಸಾಗಾಟ ಮಾಡುವ ಸಂದರ್ಭದಲ್ಲಿ ನೀರು ಚೆಲ್ಲುತ್ತಿದ್ದು ಪರಿಸರಕ್ಕೆ ಪರಿಣಾಮ ಬೀರುತ್ತಿದೆ ಎಂದು ಚಾಲಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದರು.
ರಸ್ತೆಗಳಿಗೆ ಮೀನಿನ ನೀರು ಬಿಟ್ಟ ವಿಷಯದಲ್ಲಿ ಚಾಲಕನ ಮೇಲೆ ಕೇಸು ದಾಖಲು ಮಾಡಿ ಲಾರಿಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಈ ಲಾರಿಗಳನ್ನು ಬಿಡಿಸಲು ಬೇಕಾಗಿ ಚಾಲಕರು ಠಾಣೆಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಅದಕ್ಕಾಗಿಯೇ ಸಾವಿರಾರು ರೂಪಾಯಿ ವ್ಯಯವಾಗುತ್ತಿದೆ. ನಾಲ್ಕು ಪ್ರಕರಣಗಳು ಈಗಾಗಲೇ ನಡೆದಿದೆ ಎಂದು ಹೇಳಿದರು.
ಅಷ್ಟು ಮಾತ್ರವಲ್ಲದೇ ಇವರ ಮೊಬೈಲ್ ಹಣವನ್ನು ದೋಚುವ ಪ್ರಕರಣಗಳು ನಡೆದಿದೆ. ಈ ವೃತ್ತಿಯೇ ಇವರ ಜೀವನದ ಹಾದಿಯಾಗಿರುವಾಗ ಇವರಿಗೆ ಇಂತಹ ಘಟನೆಗಳಿಂದ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.
ಮನುಷ್ಯರು ಬಳಸುವ ಮೀನಿಗೆ ಮಂಜುಗಡ್ಡೆ ಹಾಕುವುದರಿಂದ ದುರ್ವಾಸನೆ ಬರುವುದಿಲ್ಲ. ಆದರೆ ಗೊಬ್ಬರದ ಮೀನುಗಳಿಗೆ ಮಂಜಗಡ್ಡೆ ಹಾಕದ ಕಾರಣ ಅದು ಕೊಳೆತು ಅದರ ನೀರು ದುರ್ವಾಸನೆ ಬರುತ್ತದೆ. ಇಂತಹ ಸಮಸ್ಯೆಗಳು ಹಿಂದೆ ಇರಲಿಲ್ಲ. ಆದರೆ ಉಳ್ಳಾಲ, ಉದ್ಯಾವರ, ಗೋವಾದಲ್ಲಿ ಗೊಬ್ಬರ ಮತ್ತು ಚಲ್ಟು ಮೀನಿನ ಕಾರ್ಖಾನೆಗಳಾದ ನಂತರ ಈ ಸಮಸ್ಯೆಗಳು ಕಾಣಿಸಿಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಧಕ್ಕೆ ಮೀನು ಚಾಲಕರ ಸಂಘದ ಅಧ್ಯಕ್ಷರಾದ ಅಮೀರ್ ಹುಸೈನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಮುಖಂಡರಾದ ಶರೀಫ್, ಬಶೀರ್ ಹಾಗೂ ಸಿ.ಕೆ ಇಸ್ಮಾಯಿಲ್ ಉಪಸ್ಥಿತರಿದ್ದರು.