ಒಡಿಯೂರು ಭೂಕುಸಿತ – ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಂಡದಿಂದ ಅಧ್ಯಯನ…..

ಪುತ್ತೂರು: ಭೂಕುಸಿತಗಳು ವಿವಿಧ ಪರಿಸರಗಳಲ್ಲಿ ವಿವಿಧ ಪರಿಸ್ಥಿತಿಗಳಲ್ಲಿ ಸಂಭವಿಸುತ್ತವೆ. ಇದು ಪರ್ವತ ಶ್ರೇಣಿಗಳಿಂದ ಹಿಡಿದು ಕರಾವಳಿಯ ಕಡಿದಾದ ಇಳಿಜಾರಿನಲ್ಲಿಯೂ ಸಂಭವಿಸಬಹುದು. ಗುರುತ್ವ ಬಲ ಇದಕ್ಕೆ ಮೂಲ ಪ್ರೇರಕ ಶಕ್ತಿಯಾಗಿದ್ದರೂ, ಎಗ್ಗಿಲ್ಲದೆ ಭೂಮಿಯನ್ನು ಅಗೆಯುವುದು ಅಥವಾ ಇಳಿಜಾರಿನಲ್ಲಿ ಅಸ್ಥಿರತೆಯನ್ನು ಉಂಟುಮಾಡುವುದರಿಂದ ಕುಸಿತಗಳು ಸಂಭವಿಸುತ್ತವೆ. ಅರಣ್ಯ ನಾಶ, ಅತಿಯಾದ ನಿರ್ಮಾಣ ವ್ಯವಸ್ಥೆ, ಇಳಿಜಾರಿನ ಆಕಾರವನ್ನು ಬದಲಿಸುವುದು ಮತ್ತು ಭೂಪ್ರದೇಶದ ಮೇಲೆ ಹೊಸ ಒತ್ತಡಗಳನ್ನು ಹೇರುವುದರಿಂದ ಮಣ್ಣು ಕುಸಿತ ಉಂಟಾಗುತ್ತದೆ.
ಇತ್ತೀಚೆಗೆ ದಕ್ಷಿಣಕನ್ನಡದ ವಿಟ್ಲ ಸಮೀಪದ ಒಡಿಯೂರು ಎಂಬಲ್ಲಿ ಭೂಕುಸಿತವೊಂದು ಸಂಭವಿಸಿತು. ಈ ದುರ್ಘಟನೆಯಲ್ಲಿ ಮೂರು ಜನ ಕಾರ್ಮಿಕರು ಮಣ್ಣಿನಡಿ ಸಿಲುಕಿ ಅಸುನೀಗಿದರು. ನಿರ್ಮಾಣವೊಂದರ ಫೌಂಡೇಶನ್ ಪಿಟ್‍ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿತು. ಸಮಾನಾಂತರದಲ್ಲಿ ಜೆಸಿಬಿ ಕೆಲಸವೂ ಇಲ್ಲಿ ನಡೆಯುತ್ತಿತ್ತು.

ಅವಲೋಕನದಲ್ಲಿ ಕಂಡುಕೊಂಡ ವಿಚಾರಗಳು: ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕಾಗಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸಂದೀಪ್.ಜೆ.ನಾಯಕ್ ಅವರ ನೇತೃತ್ವದಲ್ಲಿ ಡಾ.ಸೌಮ್ಯ.ಎನ್.ಜೆ, ಪ್ರೊ..ಸುಬ್ರಮಣ್ಯ.ಆರ್.ಎಂ ಮತ್ತು ಪ್ರೊ .ಜಯಕೃಷ್ಣ ಭಟ್ ಅವರ ತಂಡವು ಅಲ್ಲಿಗೆ ಭೇಟಿ ನೀಡಿ ಅಧ್ಯಯನ ವರದಿಯೊಂದನ್ನು ತಯಾರಿಸಿದೆ. ಪರಿವೀಕ್ಷಣೆಯ ಸಮಯದಲ್ಲಿ ಕಂಡುಕೊಂಡ ವಿಚಾರಗಳೆಂದರೆ, ಅಗೆದ ಪ್ರದೇಶದ ಮುಕ್ಕಾಲು ಭಾಗವು ತುಂಬಿಸಿದ ಮಣ್ಣಿನ ಪ್ರದೇಶವಾಗಿತ್ತು. ಸುಮಾರು 40 ಅಡಿ ಆಳಕ್ಕೆ ಮಣ್ಣನ್ನು ತುಂಬಿಸಲಾಗಿತ್ತು. ಇದಲ್ಲದೆ ಹತ್ತಿರದಲ್ಲೇ ಇರುವ ಕಟ್ಟಡಗಳಿಂದ ಇಳಿಜಾರಿನ ಮೇಲೆ ಅಧಿಕ ಒತ್ತಡವು ಬೀಳುತ್ತಿತ್ತು. ಸುಮಾರು 10-15 ವರ್ಷಗಳ ಮೊದಲೇ ಮಣ್ಣನ್ನು ತುಂಬಿಸಲಾಗಿದ್ದರೂ ಇದನ್ನು ಸರಿಯಾದ ರೀತಿಯಲ್ಲಿ ಸಂಕ್ಷೇಪಿಸಿಲ್ಲ ಎನ್ನುವುದು ತಿಳಿದುಬಂದಿದೆ. ಮಣ್ಣಿನ ಪದರಗಳನ್ನು ಗಮನಿಸಿದಾಗ ಅದನ್ನು ಸಂಕುಚಿತಗೊಳಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎನ್ನುವುದು ಖಚಿತವಾಗಿದೆ. ಮಣ್ಣು ತುಂಬಿಸಿ ದಶಕಗಳೇ ಕಳೆದರೂ ಮಣ್ಣಿನ ಬಲವರ್ಧನೆ ನಡೆಯದಿರುವುದು ಅಚ್ಚರಿಯ ವಿಚಾರ.
ಹೊಸ ನಿರ್ಮಾಣದ ಅಂದರೆ ಪಾರ್ಕಿಂಗ್ ಹಾಗೂ ಊಟದ ಹಾಲ್ ನಿರ್ಮಿಸುವ ಸಂದರ್ಭದಲ್ಲಿ ಧರೆಯನ್ನು ಲಂಬವಾಗಿ ಕಡಿಯಲಾಗಿದೆ ಮತ್ತು ಸಮತಲ ದಿಕ್ಕಿನಲ್ಲಿ ಸೂಕ್ತ ಇಳಿಜಾರು ಒದಗಿಸಲಾಗಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಮಣ್ಣಿನ ಧಾರಣಾ ಸಾಮಥ್ರ್ಯ ಕುಸಿಯುವುದರಿಂದ ಇಳಿಜಾರಿನ ವೈಫಲ್ಯಕ್ಕೆ ಕಾರಣವಾಗುತ್ತದೆ. ಆದರೆ ಈ ಕುಸಿತವು ಬೇಸಿಗೆಯಲ್ಲಿಯೇ ಸಂಭವಿಸಿದ್ದರಿಂದ ಧರೆಯನ್ನು ಲಂಬವಾಗಿ ಕತ್ತರಿಸಿದುದೇ ಮುಖ್ಯ ಕಾರಣವೆಂದು ಕಂಡುಕೊಳ್ಳಲಾಗಿದೆ. ಇದನ್ನು ಆವರ್ತಕ ವೈಫಲ್ಯ ಎಂದು ಅಂದಾಜಿಸಲಾಗಿದೆ.
ಈ ಕುಸಿತವು ಮೊದಲೇ ಸಂಭವಿಸುವ ಸಾಧ್ಯತೆ ಇತ್ತು ಆದರೆ ಆ ಸ್ಥಳದಲ್ಲಿದ್ದ ಮಾವಿನ ಮರದಿಂದಾಗಿ ಇದು ನಿಧಾನವಾಗಿರುವ ಸಾಧ್ಯತೆ ಇದೆ. ಆದರೆ ಇದೇ ಮಾವಿನ ಮರವು ಉರುಳಿಬಿದ್ದದ್ದರಿಂದ ಹೆಚ್ಚಿನ ಕುಸಿತ ಸಂಭವಿಸಿದೆ.
ನಿವಾರಣೋಪಾಯಗಳು:
1) ರಿಟೈನಿಂಗ್ ವಾಲ್‍ಗಳ ಜೊತೆಗೆ ಕಾಲಮ್ ಮತ್ತು ಬೀಮ್‍ಗಳನ್ನು ನಿರ್ಮಿಸುವುದರಿಂದ ರಿಟೈನಿಂಗ್ ಗೋಡೆಗಳಿಗೆ ಸಾಕಷ್ಟು ಬಲ ನೀಡಿದಂತಾಗುತ್ತದೆ.
2) ರಿಟೈನಿಂಗ್ ವಾಲ್‍ಗಳ ಹಿಂಬದಿಯಲ್ಲಿ ಒಂದು ಅಡಿಯಷ್ಟು ಜಲ್ಲಿ ಅಥವಾ ಒರಟಾದ ಮರಳನ್ನು ತುಂಬಿಸುವುದರಿಂದ ಮಳೆಗಾಲದಲ್ಲಿ ರಂಧ್ರಗಳಾಗುವುದನ್ನು ತಡೆಯಬಹುದು.
3) ಒತ್ತಡವನ್ನು ಭೂಮಿಗೆ ಸಮಾನವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ರಿಟೈನಿಂಗ್ ವಾಲ್ ಹಾಗೂ ಕಟ್ಟಡಗಳ ವಿನ್ಯಾಸವು ಸರಿಯಾಗಿರಬೇಕು.

Sponsors

Related Articles

Leave a Reply

Your email address will not be published. Required fields are marked *

Back to top button