ಕಬಕ ಪದವಿಪೂರ್ವ ಕಾಲೇಜಿನಲ್ಲಿ ಗೈಡ್ಸ್ ದಳ ಉದ್ಘಾಟನೆ….
ಬಂಟ್ವಾಳ: ವಿದ್ಯಾರ್ಥಿಗಳನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಶಿಕ್ಷಣ ಶಾಲೆಗಳಲ್ಲಿ ಸಿಗಬೇಕು. ವಿದ್ಯಾರ್ಥಿಗಳು ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿ ಆತ್ಮವಿಶ್ವಾಸ ಬೆಳೆಸಬೇಕು. ಶಾಲೆಯ ಅಭಿವೃದ್ಧಿಗೆ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಸಾಮಾಜಿಕ ಮುಖಂಡ ಎಸ್.ಡಿ.ಎಮ್.ಸಿ ಕಾರ್ಯಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ ಹೇಳಿದರು.
ಅವರು ಕಬಕ ಸರಕಾರಿ ಪ್ರೌಢ ಶಾಲೆಯಲ್ಲಿ ದ.ಕ. ಜಿಲ್ಲಾ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ಏರ್ಪಡಿಸಲಾದ ಅಬ್ಬಕ್ಕರಾಣಿ ಗೈಡ್ಸ್ ದಳವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ವಿಶ್ರಾಂತ ಯೋಧ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ತಾರನಾಥ್ ಬೋಳಾರ್ ಮಾತನಾಡಿ ಸೈನಿಕರ ತ್ಯಾಗ ಬಲಿದಾನದಿಂದಾಗಿ ನಾವು ಸುಖ ಶಾಂತಿಯಿಂದ ಬದುಕಬಹುದಾಗಿದೆ. ಸೈನ್ಯದಲಿ ಸೇರುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಮಾಹಿತಿ ನೀಡಿ ದೇಶ ಪ್ರೇಮ ಗೀತೆ ಹಾಡಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಸಾಹಿತಿ ಜಯಾನಂದ ಪೆರಾಜೆ ಅಭ್ಯಾಗತರಾಗಿ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ದಳದ ಸೇವಾಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗೈಡ್ಸ್ ನಿಯಮದ 9 ಅಂಶಗಳನ್ನು ವಿವರಿಸಿದರು. ಶಾಲೆಯಲ್ಲಿ ಗೈಡ್ಸ್ ದಳವನ್ನು ಆರಂಭಿಸಿರುವುದಕ್ಕೆ ಶಿಕ್ಷಕರನ್ನು ಅಭಿನಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಶಫಿಉಲ್ಲಾ ಎಸ್. ಅಧ್ಯಕ್ಷತೆ ವಹಿಸಿ ಗೈಡ್ಸ್ ಸಂಬಂಧಿಸಿದ ವಿವಿಧ ಪರಿಕರಗಳನ್ನು ವಿತರಿಸಿದರು. ವಿಶ್ರಾಂತ ಯೋಧ ತಾರನಾಥ ಬೋಳಾರ್ ಮತ್ತು ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ಇವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಿಜ್ಞಾನ ಶಿಕ್ಷಕಿ ಇಂದಿರಾ ಕೆ.ಸ್ವಾಗತಿಸಿದರು. ಗೈಡ್ಸ್ ಶಿಕ್ಷಕಿ ಶಾಂತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಗೈಡ್ಸ್ ದಳದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಶಾನಿಯಾ ನಿರೂಪಿಸಿ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಯ್ಯ ಕೆ. ವಂದಿಸಿದರು.