ಸುರತ್ಕಲ್ – ನಿನ್ನೆ ಮೃತಪಟ್ಟ ವ್ಯಕ್ತಿಗೆ ಕೊರೊನಾ ನೆಗೆಟಿವ್….
ಮಂಗಳೂರು : ಸುರತ್ಕಲ್ ನಲ್ಲಿ ಉಸಿರಾಟದ ಸಮಸ್ಯೆಯಿಂದ ನಿನ್ನೆ ಸಾವನ್ನಪ್ಪಿದ್ದ ವ್ಯಕ್ತಿಯ ಕೊರೊನ ಪರೀಕ್ಷಾ ರಿಪೋರ್ಟ್ ನೆಗೆಟಿವ್ ಆಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮಂಗಳವಾರ ಸಂಜೆ ಮೃತಪಟ್ಟಿದ್ದ ಇಲ್ಲಿನ ಸುರತ್ಕಲ್ ಸಮೀಪದ ಇಡ್ಯಾ ನಿವಾಸಿ 27 ವರ್ಷ ವಯಸ್ಸಿನ ಯುವಕ ಅಪೆಂಡಿಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ, ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಆತ ಮೃತಪಟ್ಟಿದ್ದ.
ಅಂತಿಮ ಕ್ಷಣಗಳಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದ ಎಂಬ ಕಾರಣಕ್ಕೆ ಮೃತದೇಹದಿಂದಲೇ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಮೃತದೇಹವನ್ನು ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಯುವಕನಿಗೆ ಕೋವಿಡ್-19 ಸೋಂಕು ಇರಲಿಲ್ಲ ಎಂಬುದು ತಡರಾತ್ರಿ ಲಭಿಸಿದ ಪ್ರಯೋಗಾಲಯ ವರದಿಯಲ್ಲಿ ಖಚಿತವಾಗಿದೆ. ಅಪೆಂಡಿಸೈಟಿಸ್ ಉಲ್ಬಣಿಸಿ ಆತ ಮೃತಪಟ್ಟಿರುವುದು ಖಾತರಿಯಾಗಿದೆ. ಆ ಬಳಿಕ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.