ವಿದ್ಯಾರ್ಥಿಗಾಗಿ ಪುಸ್ತಕ ವಿತರಣೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ…
ಪಂಚೇಂದ್ರಿಯಗಳ ನಿಯಂತ್ರಣ ಅಗತ್ಯ - ಸುರೇಶ್ ಬಾಳಿಗ...

ಬಂಟ್ವಾಳ ಆ.12 : ಮನಸ್ಸಿನಲ್ಲಿ ಏಕಾಗ್ರತೆ ಇದ್ದಾಗ ಮಾತ್ರ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ. ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಿರಂತರ ಅಭ್ಯಾಸ ಮಾಡಬೇಕು ಎಂದು ಎಸ್.ವಿ ಎಸ್. ದೇವಳ ಪದವಿಪೂರ್ವ ಕಾಲೇಜಿನ ಸಂಚಾಲಕ ಸ್ವರ್ಣೋದ್ಯಮಿ ಸುರೇಶ್ ಬಾಳಿಗ ಹೇಳಿದರು.
ಅವರು ಎಸ್.ವಿ.ಎಸ್. ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಪುರುಷೋತ್ತಮಾನಂದ ಅವರು ಬರೆದಿರುವ ವಿದ್ಯಾರ್ಥಿಗಾಗಿ ಎಂಬ ಪುಸ್ತಕ ವಿತರಣೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ತಾರನಾಥ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೆಸಿಐ ರಾಜ್ಯ ತರಬೇತುದಾರ ,ಉಪನ್ಯಾಸಕ ಜಯಾನಂದ ಪೆರಾಜೆ ಮಾತನಾಡಿದರು.
ವೇದಿಕೆಯಲ್ಲಿ ವಿವೇಕ ವಂಶಿ ಫೌಂಡೇಶನ್ ಕರ್ನಾಟಕದ ಸಂಯೋಜಕ ಪ್ರಭಂಜನ ಪುಸ್ತಕ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ನೀಡಿದರು. ಎಸ್.ವಿ.ಎಸ್. ದೇವಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಅಳ್ವ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುರೇಖಾ ಉಪಸ್ಥಿತರಿದ್ದರು. ಸಂಯೋಜಕಿ ರೇಖಾ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ವಂದಿಸಿದರು. ವಿದ್ಯಾರ್ಥಿಗಳಿಗೆ ವಿವೇಕ ಫೌಂಡೇಶನ್ ವತಿಯಿಂದ ನೀಡಲಾಗುವ ಪುಸ್ತಕ ಹಾಗೂ ಪ್ರಶ್ನೆ ಪ್ರತಿಕೆಗಳನ್ನು ವಿತರಿಸಲಾಯಿತು.