ನಾಡವ, ಸಿದ್ದಿ, ಬೋವಿ ಸಮಾಜದಿಂದ ಸುವರ್ಣಪಾದುಕಾ ಸೇವೆ…

ಸಹಜ ಜೀವನಕ್ಕೆ ಸ್ವಭಾಷೆ ಅನಿವಾರ್ಯ: ರಾಘವೇಶ್ವರ ಶ್ರೀ...

ಗೋಕರ್ಣ: ಸ್ವಭಾಷೆ ಎನ್ನುವುದು ಸಹಜ ಭಾಷೆ; ನಮ್ಮ ಸಹಜ ಜೀವನಕ್ಕೆ ಸ್ವಭಾಷೆ ಅನಿವಾರ್ಯ. ನಾವು ಸಹಜ ಭಾಷೆ ಬದಲು ಬೇರೆ ಭಾಷೆ ಬಳಸುತ್ತಿದ್ದೇವೆ ಎಂದರೆ ನಮ್ಮ ಜೀವನ ಸಹಜವಾಗಿಲ್ಲ ಎಂಬ ಅರ್ಥ ಎಂದು ಶ್ರೀಮಜ್ಜಗದ್ಗರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 34ನೇ ದಿನವಾದ ಮಂಗಳವಾರ ಬೆಂಗಳೂರಿನ ಮಂಜುನಾಥ ಹೆಬ್ಬಾಲೆ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು. ನಮ್ಮ ಭಾಷೆಯ ಪದಗಳನ್ನು ಮರೆತು ಬೇರೆ ಭಾಷೆಯ ಪದಗಳನ್ನು ನಮ್ಮ ಸಹಜ ಭಾಷೆಯಲ್ಲಿ ಕಲಬೆರಕೆ ಮಾಡಿಕೊಂಡಿದ್ದೇವೆ ಎಂದರೆ ನಮ್ಮ ಜೀವನ ಸಹಜವಾಗಿಲ್ಲ ಎಂಬ ಅರ್ಥ ಎಂದು ವಿಶ್ಲೇಷಿಸಿದರು.
ದಿನಕ್ಕೊಂದು ಇಂಗ್ಲಿಷ್ ಪದ ತ್ಯಾಗದ ಅಭಿಯಾದಲ್ಲಿ ಚಾರ್ಜ್- ಚಾರ್ಜರ್ ಎಂಬ ಪದ ಬಿಡುವಂತೆ ಸಲಹೆ ಮಾಡಿದರು. ನಮ್ಮ ನಮ್ಮ ಚರವಾಣಿಗಳಿಗೆ ಚಾರ್ಜ್ ಮಾಡುವುದು ಎಂಬ ಶಬ್ದ ಬಳಸುತ್ತೇವೆ. ಚಾರ್ಜ್ ಎಂಬ ಪದಕ್ಕೆ ಕನ್ನಡ ಪದ ಇದೆ ಎನ್ನುವುದೇ ಹೆಚ್ಚಿನವರಿಗೆ ತಿಳಿದಿಲ್ಲ ಎಂದು ಹೇಳಿದರು.
ಚಾರ್ಜ್ ಎಂಬ ಪದಕ್ಕೆ ಇಂಗ್ಲಿಷ್‍ನಲ್ಲಿ ವಿದ್ಯುತ್ ತುಂಬುವುದು ಎಂಬ ಅರ್ಥ ನಿಘಂಟುಗಳಲ್ಲಿ ಕೂಡಾ ಮೊದಲಿಗೆ ಇಲ್ಲ. ಹಣ ವಿಧಿಸುವುದು, ಶುಲ್ಕ, ಆರೋಪ ಹೊರಿಸುವುದು, ಅಧಿಕಾರ, ಆಜ್ಞೆ ಮಾಡುವುದು, ಮೇಲೇರಿ ಬರುವುದು ಎಂಬ ಅರ್ಥಗಳಿವೆ. ಕೊನೆಗೆ ವಿದ್ಯುತ್ ಭರ್ತಿ ಮಾಡುವುದು ಎಂಬ ಅರ್ಥ ನೀಡಲಾಗಿದೆ. ಅಂದರೆ ಅವರಲ್ಲಿ ಕೂಡಾ ಬೇರೆ ಅರ್ಥದ ಪದವನ್ನು ವಿದ್ಯುತ್ ಪೂರಣಕ್ಕೆ ಬಳಸಲಾಯಿತು ಎನ್ನುವುದು ತಿಳಿಯುತ್ತದೆ ಎಂದು ವಿವರಿಸಿದರು.
ಸಂಸ್ಕೃತದಲ್ಲಿ ಪೂರಣ ಎಂಬ ಪದ ಬಳಕೆಯಲ್ಲಿದ್ದು, ಚಾರ್ಜ್ ಎಂಬ ಪದಕ್ಕೆ ಇದನ್ನು ಬಳಸಬಹುದು. ತುಂಬಿಸು ಎಂಬ ಅರ್ಥವನ್ನು ಇದು ನೀಡುತ್ತದೆ. ಅಂತೆಯೇ ಚಾರ್ಜರ್ ಸಾಧನಕ್ಕೆ ಚೇತಕ, ಪೂರಕ ಎಂಬ ಶಬ್ದಗಳನ್ನು ರೂಢಿಗೆ ತರೋಣ. ಮೊದಲು ಸ್ವಲ್ಪ ಅಪರಿಚಿತ ಎನಿಸಿದರೂ ಮುಂದೆ ಸಹಜವಾಗುತ್ತದೆ ಎಂದರು.
ನಾಡವ, ಸಿದ್ದಿ ಮತ್ತು ಬೋವಿ ಸಮಾಜದವರಿಂದ ಸುವರ್ಣ ಪಾದುಕಾಪೂಜೆ ನೆರವೇರಿತು. ಮೂರೂ ಸಮಾಜಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಸಮಾಜ ಬಾಂಧವರು ಸಾಂಪ್ರದಾಯಿಕ ಗುರುಪೀಠಕ್ಕೆ ವಾರ್ಷಿಕ ಸೇವೆ ಸಮರ್ಪಿಸಿದರು. ಸಮಾಜದ ಪ್ರತಿ ಮನೆಗಳಿಗೆ ವಿತರಿಸಲು ಸಮಾಜದ ಮುಖಂಡರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ನಾಡವ ಸಮಾಜದ ಮುಖಂಡರಾದ ಬೀರಣ್ಣ ಮಾಸ್ತರ್, ನಿತ್ಯಾನಂದ ನಾಯಕ ಅಚವೆ, ನಾರಾಯಣ ನಾಯಕ, ಬೋವಿ ಸಮಾಜದ ಮುಖಂಡರಾದ ಅನಂತ ಬೈಂದೂರು, ರಾಮದಾಸ ಸಿರ್ಸಿಕರ, ಸಿದ್ದಿ ಸಮಾಜದ ಮುಖಂಡರಾದ ನಾರಾಯಣ ಸಿದ್ದಿ, ಶಿವಾನಂದ ಸಿದ್ದಿ, ರಾಮು ಸಿದ್ದಿ, ಕೃಷ್ಣ ಸಿದ್ದಿ, ಸರ್ವ ಸಮಾಜ ಸಂಯೋಜಕ ಕೆ.ಎನ್.ಹೆಗಡೆ, ವಿ.ಡಿ.ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
ಸಂಕಷ್ಟಿ ಚತುರ್ಥಿಯ ದಿನವಾದ ಮಂಗಳವಾರ ಗೋಕರ್ಣದ ಗಣಪತಿ ದೇವಾಲಯದಲ್ಲಿ ಶ್ರೀಮಠದ ವತಿಯಿಂದ ಮೋದಕ ಕಣಜ ಸೇವೆ ನೆರವೇರಿಸಲಾಯಿತು.

whatsapp image 2025 08 12 at 8.55.01 pm

whatsapp image 2025 08 12 at 8.55.01 pm (1)

whatsapp image 2025 08 12 at 8.55.02 pm (1)

Related Articles

Back to top button