ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಮಂಗಳೂರಿನಲ್ಲಿ ಹಲವಾರು ಕೇಸ್…..
ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ 2007ರಿಂದ ತೊಡಗಿ 2018ರ ತನಕ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 34 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
28 ಬೆದರಿಕೆ ಪ್ರಕರಣಗಳು ಸೇರಿದಂತೆ ಒಂದು ಕೊಲೆ ಪ್ರಕರಣ, ಮೂರು ಶೂಟೌಟ್ ಪ್ರಕರಣಗಳು, ಒಂದು ಅಪಹರಣ, ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ತನ್ನ ಸಹಚರರಿಗೆ ಹಣ ಪೂರೈಕೆ ಮಾಡಿದ ಪ್ರಕರಣಗಳಲ್ಲಿ ರವಿ ಪೂಜಾರಿ ಆರೋಪಿಯಾಗಿದ್ದಾನೆ.10 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ.
ಹಫ್ತಾ ಹಣ ನೀಡಲು ನಿರಾಕರಿಸಿದ ಆರೋಪದ ಮೇಲೆ ಬಿಲ್ಡರ್ ಗೆ ಶೂಟೌಟ್ (ಕದ್ರಿ ಠಾಣೆ-2008), ಕೂಳೂರಿನ ಶಿಪಿಂಗ್ ಕಂಪೆನಿ (ಕಾವೂರು ಠಾಣೆ- 2008), ಬಿಜೈಯ ಬಿಲ್ಡರ್ (ಉರ್ವ ಠಾಣೆ- 2014) ಒಬ್ಬರ ಮೇಲೆ ಶೂಟೌಟ್ ನಡೆಸಿದ್ದನು.
ಕಿನ್ನಿಗೋಳಿಯ ಉದ್ಯಮಿಗೆ ಬೆದರಿಕೆ ಮತ್ತು ಅಪಹರಣ ಸಂಬಂಧ ಮೂಲ್ಕಿ ಠಾಣೆ-2012ರಲ್ಲಿ ಹಾಗೂ ಜೈಲಿನಲ್ಲಿದ್ದ ತನ್ನ ಸಹಚರರಿಗೆ ಹಣ ಪೂರೈಕೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. 17 ಪ್ರಕರಣಗಳಲ್ಲಿ “ಸಿ’ ರಿಪೋರ್ಟ್ ಹಾಗೂ ಒಂದು ಪ್ರಕರಣದಲ್ಲಿ “ಬಿ’ ರಿಪೋರ್ಟ್ ಸಲ್ಲಿಕೆಯಾಗಿದೆ.
ವಕೀಲ ನೌಶಾದ್ ಕಾಶಿಮ್‌ಜಿ ಕೊಲೆಯನ್ನು (2009) ಈತ ನಡೆಸಿದ್ದು, ರವಿ ಪೂಜಾರಿಗೆ ನ್ಯಾಯಾಲಯದಿಂದ ಇದಕ್ಕೆ ಸಂಬಂಧಿಸಿ ಶಿಕ್ಷೆ ಆಗಿದೆ. ಆದರೆ ಆತ ಇದುವರೆಗೆ ಪತ್ತೆ ಆಗಿರಲಿಲ್ಲ.