ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಜೀವ ರಕ್ಷಕ ಸಾಧನ…

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಐಒಟಿ ಪ್ರಯೋಗಾಲಯದಲ್ಲಿ ಕಡಿಮೆ ವೆಚ್ಚದ ಉಸಿರಾಟ ನಿಯಂತ್ರಕ ‘ವಿವೇಕ ಜೀವವರ್ಧಕ’ ಎನ್ನುವ ಸ್ವಚ್ಚ ಸ್ವಸ್ಥ ಶ್ವಾಸಕ್ರಿಯಾ ಸಾಧನವನ್ನು (ವೆಂಟಿಲೇಟರ್) ಅಭಿವೃದ್ದಿಪಡಿಸಲಾಗಿದೆ.
ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಇದರ ಪ್ರಾತ್ಯಕ್ಷಿಕೆ ನೀಡಲಾಯಿತು. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಜಿಲ್ಲಾ ಶಸ್ತ್ರಚಿಕಿತ್ಸಾ ತಜ್ಞರ ಪ್ರತಿನಿಧಿಗಳಾಗಿ ಆಗಮಿಸಿದ ಮಂಗಳೂರು ವೆನ್‍ಲಾಕ್ ಆಸ್ಪತ್ರೆಯ ಅರಿವಳಿಕೆ ತಜ್ಞೆ ಡಾ.ಜೆಸಿಂತಾ ಡಿ.ಸೋಜ ಮತ್ತು ವೈದ್ಯ ಡಾ. ವಿಜಯ್ ಕುಮಾರ್ ಈ ಸಾಧನದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ನಿರ್ದೇಶಕರು, ಪ್ರಾಂಶುಪಾಲರು ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.
ಕೊರೋನಾ ವೈರಸ್‍ನಿಂದ ಹರಡುವ ಕೋವಿದ್-19 ರೋಗವು ವಿಶ್ವಾದ್ಯಂತ ವ್ಯಾಪಿಸಿದೆ. ನೇರವಾಗಿ ಮಾನವನ ಶ್ವಾಸಕೋಶವನ್ನು ಹೊಕ್ಕು ಅಲ್ಲೋಲ ಕಲ್ಲೋಲ ಉಂಟುಮಾಡುವ ಈ ವೈರಸ್ ಕೆಲವೊಮ್ಮೆ ಉಸಿರಾಟ ವ್ಯವಸ್ಥೆಯನ್ನು ಬುಡಮೇಲುಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಪ್ರಸಕ್ತ ಆಸ್ಪತ್ರೆಗಳಲ್ಲಿ ಸೀಮಿತ ಕೃತಕ ಉಸಿರಾಟದ ಪರಿಕರಗಳು ಲಭ್ಯವಿದ್ದು, ಇದರ ವೆಚ್ಚ ಅಧಿಕವಾಗಿರುತ್ತದೆ. ಈ ವಿಷಯಗಳನ್ನು ಗಣನೆಯಲ್ಲಿರಿಸಿಕೊಂಡು ಕಾಲೇಜಿನ ಪ್ರಯೋಗಾಲಯಗಳಲ್ಲಿ ಲಭ್ಯವಿದ್ದ ಪರಿಕರಗಳನ್ನು ಬಳಸಿಕೊಂಡು ಈ ಸಾಧನವನ್ನು ನಿರ್ಮಿಸಲಾಗಿದೆ.
ಪ್ರತಿ ಮನುಷ್ಯನಿಗೆ 6 – 10 ಎಂಎಲ್/ಕೆಜಿ ಆಮ್ಲಜನಕ ಅಗತ್ಯವಿದೆ. ಈ ಮಾನದಂಡವನ್ನು ಬಳಸಿಕೊಂಡು ಈ ಯಂತ್ರವನ್ನು ಅಭಿವೃದ್ದಿಪಡಿಸಲಾಗಿದೆ. ಆರ್ಡಿನೋ ತಂತ್ರಜ್ಞಾನವನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ಇಲ್ಲಿ ಆಕ್ಸಿಜನ್ ಸಿಲಿಂಡರಿನಿಂದ ಬರುವ ಆಮ್ಲಜನಕವು ನಿಗದಿತ ಪ್ರಮಾಣದಲ್ಲಿ ಮತ್ತು ನಿರ್ದಿಷ್ಟ ವೇಗದಲ್ಲಿ ಪೂರೈಕೆಯಾಗುವಂತೆ ಮಾಡಿ ರೋಗಿಯ ಉಸಿರಾಟ ಕ್ರಿಯೆಯನ್ನ್ನು ನಿಯಂತ್ರಿಸಲಾಗುತ್ತದೆ. ತಜ್ಞ ವೈದ್ಯರ ಸಲಹೆಯಂತೆ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಜೀವರಕ್ಷಕವಾಗಿ ಇದನ್ನು ಬಳಸಬಹುದು. ಈ ಸಾಧನದ ನಿರ್ಮಾಣ ವೆಚ್ಚ ಸುಮಾರು ಹತ್ತು ಸಾವಿರ ರೂಪಾಯಿಗಳಾಗಿರುತ್ತದೆ.
ದೇರಳಕಟ್ಟೆ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಅರಿವಳಿಕೆ ಮತ್ತು ತುರ್ತು ಆರೈಕೆ ವಿಭಾಗದ ಡಾ.ವರುಣ್ ಭಾಸ್ಕರ್, ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಭಾಸ್ಕರ್ ಎಸ್, ಕನ್ಸಲ್ಟೆಂಟ್ ಗೈನಕಾಲಜಿಸ್ಟ್ ಡಾ.ಅನಿಲ್ ಬೈಪಾಡಿತ್ತಾಯ ಮತ್ತು ಅರಿವಳಿಕೆ ತಜ್ಞ ಡಾ.ಎಸ್.ಎಂ.ಪ್ರಸಾದ್ ಅವರು ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ.
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಮಾಜಮುಖೀ ಧ್ಯೇಯಗಳಿಗೆ ಅನುಗುಣವಾಗಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ರಾಧಾಕೃಷ್ಣ ಭಕ್ತ ಅವರ ಮನಸ್ಸಿನ ಆಲೋಚನೆಗಳನ್ನು ಇಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಅವರ ವಿಶೇಷ ಮುತುವರ್ಜಿಯಲ್ಲಿ, ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಅವರ ಮಾರ್ಗದರ್ಶನದೊಂದಿಗೆ ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್, ಸಹಾಯಕ ಪ್ರಾಧ್ಯಾಪಕಿ ಪ್ರೊ.ಸೌಮ್ಯಾ ಅನಿಲ್, ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಸುದರ್ಶನ್.ಎಂ.ಎಲ್, ಪ್ರೊ.ಸತೀಶ್, ಪ್ರೊ.ಭಾಸ್ಕರ್ ಕುಲಕರ್ಣಿ, ತಾಂತ್ರಿಕ ಸಿಬ್ಬಂದಿಗಳಾದಶಿವಪ್ರಸಾದ್.ಎಚ್.ಎಸ್ ಮತ್ತು ವೆಂಕಟೇಶ್ ಇವರ ತಂಡವು ಇದನ್ನು ನಿರ್ಮಿಸಿದೆ ಎಂದು ಪ್ರಾಂಶುಪಾಲರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button