ಹೊಲಿಗೆ ಯಂತ್ರ ಉಚಿತ ವಿತರಣೆ…
ಸಹಕಾರಿ ಸಂಘಗಳು ಸಾಮಾಜಿಕ ಸೇವೆಯಲ್ಲಿ ತೊಡಗಲಿ- ಸುರೇಶ್ ಶೆಟ್ಟಿ...
 ಬಂಟ್ವಾಳ: ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು ಮಹಿಳಾ ಸಬಲೀಕರಣದ ಕಲ್ಪನೆಯೊಂದಿಗೆ ಹಿಂದುಳಿದ ವರ್ಗಗಳ ಮತ್ತು ಪ.ಜಾತಿ ,ಪಂಗಡಗಳ ಮಾತೆಯರಿಗೆ ಸ್ವಾವಲಂಬನೆಯ ಬದುಕನ್ನು ನಿರ್ವಹಿಸಲು ಪೂರಕವಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುಕೊಳ್ಳಬೇಕು. ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ಸುಮಾರು 60 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ಉಚಿತವಾಗಿ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯನ್ನು ನೀಡಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಾಯ ಮಾಡುವ ಮೂಲಕ ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದರು.
 ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಕರ್ನಾಟಕ ಸಹಕಾರಿ ಪಾಲಿಟೆಕ್ನಿಕ್ ,ಸಿ ಸಿ ಟೆ ಕ್ ಮಂಗಳೂರು ,ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಮತ್ತು ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಇವರ ಸಹಕಾರದಲ್ಲಿ ಸಿದ್ದಕಟ್ಟೆ ಸಹಕಾರಿ ಸಂಘದ ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಿದ ಟೈಲರಿಂಗ್ ತರಬೇತಿ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಿ ಮಾತಾನಾಡಿದರು .
 ಮುಖ್ಯ ಅತಿಥಿಯಾಗಿ ಮೂಡಬಿದ್ರಿ ಹನುಮಾನ್ ದೇವಸ್ಥಾನದ ಅರ್ಚಕ ನಾಗೇಂದ್ರ ಭಟ್ ಮಾತಾನಾಡಿ ಗೃಹಿಣಿಯರು ಟೈಲರಿಂಗ್ ತರಬೇತಿಯನ್ನು ಪಡೆದುಕೊಂಡು ಕುಟುಂಬ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದರು. ಮಂಗಳೂರು ಸಿಸಿ ಟೆಕ್ ಮ್ಯಾನೇಜರ್ ರವೀಂದ್ರ ಎಂ. ಖೇಣಿ ಮಾತಾನಾಡಿ ಕರ್ನಾಟಕ ಸಹಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಾರ್ಗದರ್ಶನ ನೀಡುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಅಧ್ಯಕ್ಷ ಪ್ರಭಾಕರ ಪ್ರಭು ಮಾತಾನಾಡಿದರು. ಹಿರಿಯರ ಆಶಯದಂತೆ ನಮ್ಮ ಸಂಘವು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿರುವ ಜನರಿಗೆ ವಿವಿಧ ರೀತಿಯಲ್ಲಿ ತಮ್ಮ ಜೀವನೋಪಾಯಕ್ಕೆ ಪೂರಕವಾಗಿರುವ ಯೋಜನೆಗಳಿಗೆ ಸ್ಪಂದಿಸುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ , ಸಂಗಬೆಟ್ಟು ಗ್ರಾ.ಪ ಅಧ್ಯಕ್ಷೆ ರಾಜೀವಿ ,ಉದ್ಯಮಿ ವೀಣಾ ಭಾಸ್ಕರ್ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ,ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಶಿವಯ್ಯ ಎಚ್ ,ಸ್ಥಾಪಕ ಅಧ್ಯಕ್ಷ ಮೈಕಲ್ ಡಿಕೋಸ್ತಾ ಇದ್ದರು.
 ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿದ್ದಕಟ್ಟೆ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಲಿಖಿತಾ ಆರ್. ಸಾಲ್ಯಾನ್ ರನ್ನು ಅಭಿನಂದಿಸಿ, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಅರ್ಹ ಮಹಿಳೆಯರಿಗೆ ಹೊಲಿಗೆ ಯಂತ್ರ ಉಚಿತವಾಗಿ ನೀಡಲಾಯಿತು.
ಸಂಘದ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಗಾರ್,ಜಾರಪ್ಪ ನಾಯ್ಕ ,ಎ. ಶಿವ ಗೌಡ,ಮಂದರಾತಿ ಎಸ್. ಶೆಟ್ಟಿ,ಪುಷ್ಪಲತಾ ಎಸ್. ಆರ್ ,ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಎಚ್. , ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ,ವಿಜಯ ಫೆರ್ನಾಂಡಿಸ್,ರಾಮಚಂದ್ರ ಶೆಟ್ಟಿಗಾರ್,ಸೀತಾರಾಮ ಶೆಟ್ಟಿ,ಹರಿಪ್ರಸಾದ್ ಶೆಟ್ಟಿ ,ನಿವೃತ್ತ ಶಿಕ್ಷಕ ಕೆ. ನಾರಾಯಣ ನಾಯಕ್ ಭಾಗವಹಿಸಿದ್ದರು.
 ಚಂದ್ರಿಕಾ ಸ್ವಾಗತಿಸಿ , ಸುಭಾಸ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.








