ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶ….

ಮುಂಬೈ: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್(54) ಅನಾರೋಗ್ಯದಿಂದಾಗಿ ವಿಧಿವಶರಾಗಿದ್ದಾರೆ.
ಟ್ಯೂಮರ್ ನಿಂದಾಗಿ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಮುಂಬೈನ ಧೀರುಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
54 ವರ್ಷದ ಇರ್ಫಾನ್ ಖಾನ್ ಕಳೆದ ಕೆಲ ವರ್ಷಗಳಿಂದ ನ್ಯೂರೋಎಂಡೋಕ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು 2018 ರಲ್ಲಿ ಲಂಡನ್ ನಲ್ಲಿ ಟ್ಯೂಮರ್ ಗೆ ಚಿಕಿತ್ಸೆ ಪಡೆದಿದ್ದರು. ಇರ್ಫಾನ್ ಖಾನ್ ಆರೋಗ್ಯ ಗಂಭೀರವಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಟನನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಕಳೆದ ವಾರವಷ್ಟೇ ಅವರ ತಾಯಿ ನಿಧನರಾಗಿದ್ದರು. ಲಾಕ್ ಡೌನ್ ನಿಂದಾಗಿ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಈ ಬಳಿಕ ಅನಾರೋಗ್ಯದಿಂದಾಗಿ ತಾವು ಕೂಡ ಮುಂಬೈನ ಕೋಕಿಲಾಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆಗೆ ಕಳೆದ ಎರಡು ದಿನಗಳ ಹಿಂದೆ ದಾಖಲಾಗಿದ್ದರು.
ಇರ್ಫಾನ್ ಖಾನ್ ಅವರು ಪತ್ನಿ ಸುತಾಪಾ ಸಿಕ್ದರ್ ಹಾಗೂ ಇಬ್ಬರು ಪುತ್ರರು ಸಹಿತ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.