ಸುದ್ದಿ

ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಸರಕಾರದ ಸಹಾಯಧನಕ್ಕೆ ಮನವಿ…

ಬಂಟ್ವಾಳ: ಯಕ್ಷಗಾನ ಮೇಳಗಳ ವ್ಯವಸ್ಥಾಪಕರ ನಿಯೋಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ.ಸಂಸದ ನಳಿನ್‌ಕುಮಾರ್ ಕಟೀಲು ಅವರನ್ನು ಮೇ.16 ರಂದು ಮಂಗಳೂರಿನಲ್ಲಿ ಭೇಟಿಯಾಗಿ ಅತಂತ್ರವಾಗಿರುವ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಸರಕಾರದ ಆರ್ಥಿಕ ಸಹಾಯಧನ ನೀಡುವಂತೆ ಒತ್ತಾಯಿಸಿ ಮನವಿ ನೀಡಿದೆ.
ಈ ವರ್ಷದ ತಿರುಗಾಟವಿಲ್ಲದೆ ಕಲಾವಿದರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಮುಂದಿನ ವರ್ಷದ ತಿರುಗಾಟ ಆರಂಭವಾಗಬೇಕಾದರೆ ನವೆಂಬರ್‌ವರೆಗೆ ಕಾಯಬೇಕಾಗಿದ್ದು, ಆದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಅದು ಕೂಡ ಆರಂಭವಾಗುವುದು ಅನುಮಾನ. ಮತ್ತೊಂದೆಡೆ ಆರ್ಥಿಕ ಸಂಕಷ್ಟದಿಂದ ಸಂಘಟಕರು ಮುಂದೆ ಬರುತ್ತಾರೆಯೇ ಎಂಬುದು ಕೂಡ ಈಗಲೇ ಹೇಳುವಂತಿಲ್ಲ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿರುವ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಸರಕಾರ ಸಹಾಯಧನ ನೀಡುವುದು ಅನಿವಾರ್ಯ ಎಂದು ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರ ನೇತೃತ್ವದಲ್ಲಿ ತೆರಳಿದ ನಿಯೋಗ ಸಚಿವರಿಗೆ ಮನವರಿಕೆ ಮಾಡಿದೆ. ವೃತ್ತಿಪರ ಕಲಾವಿದರ ಮಾಹಿತಿ ಕೇಳಿರುವ ಸಚಿವರು ಸರಕಾರದ ಮಟ್ಟದಲ್ಲಿ ಪರಿಹಾರ ದೊರಕಿಸಿಕೊಡುವುದಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
ಜತೆಗೆ ದ.ಕ, ಉಡುಪಿ, ಕಾಸರಗೋಡು, ಉತ್ತರಕನ್ನಡ, ಶಿವಮೊಗ್ಗ ಈ ಭಾಗದಲ್ಲಿ ಮಾತ್ರ ವೃತ್ತಿಪರ ಕಲಾವಿದರಿದ್ದು, ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರಕಾರಕ್ಕೆ ಒತ್ತಡ ಹೇರುವಂತೆ ಸಂಸದ ನಳಿನ್‌ಕುಮಾರ್ ಅವರಿಗೆ ನಿಯೋಗ ಒತ್ತಾಯಿಸಿದೆ.
ಯಕ್ಷಧ್ರುವ ಪಟ್ಲ ಪೌಂಢೇಶನ್ ಅಧ್ಯಕ್ಷ, ಭಾಗವತ ಸತೀಶ್ ಶೆಟ್ಟಿ ಪಟ್ಲ, ತಲಕಳ ಮೇಳದ ತಿಮ್ಮಪ್ಪ ಗುಜರನ್, ಸಸಿಹಿತ್ಲು ಮೇಳದ ದಯಾನಂದ ಗುಜರನ್, ಬಪ್ಪನಾಡು ಮೇಳದ ವಿನೋದ್‌ಕುಮಾರ್ ಬಜ್ಪೆ, ಬೆಂಕಿನಾಥೇಶ್ವರ ಮೇಳದ ಸುರೇಂದ್ರ ಮಲ್ಲಿ, ಮಂಗಳಾದೇವಿ ಯಕ್ಷಗಾನ ಮೇಳದ ಕಡಬ ದಿನೇಶ್ ರೈ, ದೇಂತಡ್ಕ ಮೇಳದ ಶ್ಯಾಮ್ ಭಟ್ ದೇಂತಡ್ಕ, ಬಾಚಕೆರೆ ಮೇಳದ ಶಶಿಧರ ಬಾಚಕೆರೆ, ಸೂಡ ಮೇಳದ ಧೀರಜ್ ರೈ ಸಂಪಾಜೆ, ತುಳುನಾಡು ಮೇಳದ ಪ್ರದೀಪ್ ಶೆಟ್ಟಿ ಕೋಡು, ಅನ್ನಪೂರ್ಣೇಶ್ವರಿ ಬನ್ನೂರು ಮೇಳದ ಗಂಗಾಧರ ಭಂಡಾರಿ, ಕಲಾವಿರಾದ ಕೋಡಪದವು ದಿನೇಶ್‌ಕುಮಾರ್, ಹರೀಶ್ ಕೊಕ್ಕಡ ಮೊದಲಾದವರು ನಿಯೋಗದಲ್ಲಿದ್ದರು.

Advertisement

Related Articles

Back to top button